ಸಿದ್ದಾಪುರ, ಅ. ೩೧: ಸಿಐಟಿಯು ಸಂಘಟನೆ ೬ನೇ ಕೊಡಗು ಜಿಲ್ಲಾ ಸಮ್ಮೇಳನ ನವೆಂಬರ್ ೨ ಮತ್ತು ೩ ರಂದು ಕುಶಾಲನಗರದ ಜೆ.ಸಿ. ಬಯ್ಯಾರೆಡ್ಡಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಪಿ ಆರ್ ಭರತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ನ್ಯಾಯಕ್ಕಾಗಿ ಸಿಐಟಿಯು ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಕಾನೂನು ರೂಪಿಸಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಯತ್ನ ನಡೆಯುತ್ತಿವೆ. ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಗ್ರಾ.ಪಂ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ವೇತನದಲ್ಲಿ ತಾರತಮ್ಯಯಾಗುತ್ತಿದೆ. ಸಿಐಟಿಯು ಸಂಘಟನೆಯು ಕಾರ್ಮಿಕರ ನ್ಯಾಯಕ್ಕಾಗಿ ಕೊಡಗು ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿದ್ದು ಸಮ್ಮೇಳನಕ್ಕೆ ಜಿಲ್ಲೆಯ ಸುಮಾರು ೧೨೫ ಕಾರ್ಮಿಕ ವಿಭಾಗಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ ಸಿ ಸಾಬು, ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ. ಕುಟ್ಟಪ್ಪ, ಜಿಲ್ಲಾ ಉಪ ಕಾರ್ಯದರ್ಶಿ ಕೆ ಎಸ್ ಸಾಜಿ ರಮೇಶ್ ಹಾಜರಿದ್ದರು.