ಕೂಡಿಗೆ, ನ. ೫: ವಿದ್ಯಾರ್ಥಿಗಳು ಕ್ರೀಡೆಯ ಮುಖೇನ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು, ಕ್ರಿಯಾಶೀಲ ತೆಯಿಂದ ತಮ್ಮ ಸಾಧನೆಯ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು. ಕ್ರೀಡೆಯು ಪಠ್ಯದ ವಿಷಯಗಳ ಜೊತೆಯಲ್ಲಿ ಐಕ್ಯತೆ, ಒಗ್ಗೂಡುವಿಕೆ ಮೂಲಕ ಸರ್ವಾಂ ಗೀಣ ಅಭಿವೃದ್ಧಿಗೆ ಸಹಕಾರಿ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸೋಮವಾರಪೇಟೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕೂಡಿಗೆ ಸಂಯುಕ್ತ ಆಶ್ರಯದಲ್ಲಿ ಸೋಮವಾರಪೇಟೆ ತಾಲ್ಲೂಕು ಹಾಗೂ ಕೊಡಗು ಜಿಲ್ಲಾಮಟ್ಟದ ೧೪ ಮತ್ತು ೧೭ ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟ ಕೂಡಿಗೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಶಾಲೆಗಳಲ್ಲಿ ವಿದ್ಯಾಭ್ಯಾಸದ ಜೊತೆಯಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ದೈಹಿಕ ಶಿಕ್ಷಕರ ನೇಮಕ ಆಗಬೇಕಾಗಿದೆ, ಜೊತೆಯಲ್ಲಿ ಸಾವಿರಾರು ಕ್ರೀಡಾ ಪಟುಗಳಿಗೆ ತರಬೇತಿ ನೀಡಿದ ಕೂಡಿಗೆ ಕ್ರೀಡಾಂಗಣದ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೂಡಿಗೆ ಡಯಟ್‌ನ ಪ್ರಾಂಶುಪಾಲ ಡಿ. ಉದಯಕುಮಾರ್ ಮಾತನಾಡಿ, ಪಠ್ಯ ಶಿಕ್ಷಣದಷ್ಟೇ ಮಹತ್ವ ಕ್ರೀಡೆಗೆ ಇದೆ. ವಿದ್ಯಾರ್ಥಿಗಳು ಕ್ರೀಡೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ತಾವು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತೊಡಗಿಸಿಕೊಳ್ಳುವ ಮೂಲಕ ಉನ್ನತಮಟ್ಟಕ್ಕೆ ಸಾಗುವಂತಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಮಾತನಾಡಿ, ಶಿಸ್ತು ಸಂಯಮದ ಜೊತೆಯಲ್ಲಿ ಕ್ರೀಡೆ ಆರೋಗ್ಯ ವೃದ್ಧಿಗೆ ಸಹಕಾರಿ, ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಂಡು ಭವಿಷ್ಯವನ್ನು ಉಜ್ವಲಗೂಳಿಸಿಕೊಳ್ಳಬೇಕು ಎಂದರು. ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಜಿ ಕುಮಾರ್, ಸೋಮವಾರಪೇಟೆ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ. ಹೇಮಂತ್, ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು, ಪ್ರಾಥಮಿಕ ಶಾಲಾ ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಹೆಚ್.ಎನ್. ಮಂಜುನಾಥ್, ಎಸ್.ಎ. ಯೋಗೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಲ್. ಸುಕುಮಾರಿ, ಸಿ.ಆರ್.ಪಿ ಕೂಡಿಗೆ ಕ್ಲಸ್ಟರ್‌ನ ಶಾಂತಕುಮಾರ್, ತಾಲೂಕು ಶಕ್ತಿ ನಿರ್ವಾಣ್‌ನ ಸಹಾಯಕ ನಿರ್ದೇಶಕ ಜಿ.ಎಂ. ಹೇಮಂತ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ. ಕುಮಾರ್ ಸೇರಿದಂತೆ ವಿವಿಧ ಸಂಘದ ಪದಾಧಿಕಾರಿಗಳು, ಹಾಗೂ ದೈಹಿಕ ಶಿಕ್ಷಕರು ತಾಲೂಕು ವ್ಯಾಪ್ತಿಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಸ್ವಾಗತಿಸಿ, ಸಿ.ಆರ್.ಪಿ. ಶಾಂತಕುಮಾರ್ ವಂದಿಸಿದರು.