ಸೋಮವಾರಪೇಟೆ, ನ. ೫: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ೧೦೦ ವರ್ಷ ಪೂರೈಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ವ್ಯಾಸಂಗ ಮಾಡಿರುವ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಈ ಸಂಭ್ರಮವನ್ನು ಇನ್ನಷ್ಟು ಅವಿಸ್ಮರಣೀಯವನ್ನಾಗಿಸಲು ಹಳೆ ವಿದ್ಯಾರ್ಥಿಗಳ ಸಂಘ, ಶತಮಾನೋತ್ಸವ ಸಮತಿ, ಶಾಲಾಭಿವೃದ್ಧಿ ಮಂಡಳಿ ಮುಂದೆ ಬಂದಿದ್ದು, ಶಾಲೆಯ ಹೊರಾಂಗಣ, ಒಳಾಂಗಣ ಸೇರಿದಂತೆ ಇಡೀ ಆವರಣ ಸುಸಜ್ಜಿತವಾಗಿ ಕಂಗೊಳಿಸುತ್ತಿದೆ. ಸುಮಾರು ೩೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯ ನಡೆದಿದ್ದು, ಸುಣ್ಣಬಣ್ಣ ಬಳಿದು ಕಂಗೊಳಿಸುತ್ತಿದೆ. ಶಾಸಕ ಡಾ. ಮಂತರ್ ಗೌಡ ಅವರು ವಿಶೇಷ ಆಸಕ್ತಿ ವಹಿಸಿದ ಪರಿಣಾಮ ಹಳೆ ವಿದ್ಯಾರ್ಥಿಗಳ ಸಂಘದ ನಿರೀಕ್ಷೆಗೂ ಮೀರಿ ಶಾಲೆ ಅಭಿವೃದ್ಧಿಯಾಗಿದೆ. ಶತಮಾನೋತ್ಸವದ ನೆಪದಲ್ಲಿ ಸರ್ಕಾರಿ ಶಾಲೆಯೊಂದು ಮದುವಣಗಿತ್ತಿಯಂತೆ ಸಿಂಗಾರಗೊAಡಿದೆ.

ಒಂದೊಮ್ಮೆ ನೂರಾರು ಮಕ್ಕಳು ಕಲಿಯುತ್ತಿದ್ದ ಶಾಲೆಯಲ್ಲಿ ೨೦೧೫ರಲ್ಲಿ ೪೩ ವಿದ್ಯಾರ್ಥಿಗಳಿದ್ದರು. ೨೦೧೬ರಲ್ಲಿ ಕೇವಲ ೧೬ ವಿದ್ಯಾರ್ಥಿಗಳಿದ್ದ ಶಾಲೆಯನ್ನು ಮುಚ್ಚುವ ಹಂತಕ್ಕೆ ಇಲಾಖೆ ಬಂದಿತ್ತು. ಈ ಸಂದರ್ಭ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಬಂದ ಯೋಗೇಶ್ ಅವರು, ಶಾಲಾ ವ್ಯಾಪ್ತಿಯ ಗ್ರಾಮಗಳಾದ ಬೇಳೂರು, ಕುಸುಬೂರು, ಕೆಂಚಮ್ಮನಬಾಣೆ, ಬಸವನಳ್ಳಿ, ಕಾರೇಕೊಪ್ಪ ವ್ಯಾಪ್ತಿಯ ಮನೆಗಳಿಗೆ ತೆರಳಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಸಫಲರಾದರು.

ಇದರೊಂದಿಗೆ ಸ್ಥಳೀಯ ದಾನಿಗಳಾದ ಡಾ. ಚಂದ್ರಮೌಳಿ ಅವರೊಂದಿಗೆ ಸಮಾಲೋಚನೆ ನಡೆಸಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸಿದರು. ಚಂದ್ರಮೌಳಿ ಅವರು ಶಾಲೆಗೆ ೨ ಕಂಪ್ಯೂಟರ್, ೧ ಲ್ಯಾಪ್‌ಟಾಪ್ ಒದಗಿಸಿಕೊಟ್ಟರಲ್ಲದೆ, ಕಂಪ್ಯೂಟರ್ ಶಿಕ್ಷಕಿ, ಸ್ಪೋಕನ್ ಇಂಗ್ಲೀಷ್ ಶಿಕ್ಷಕಿಯನ್ನು ನಿಯೋಜಿಸಿ ಪ್ರತಿ ತಿಂಗಳು ವೇತನ ಪಾವತಿಸಿಕೊಂಡು ಬರುತ್ತಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೇ ಸುತ್ತಮುತ್ತಲ ಗ್ರಾಮಗಳಿಂದ ಪ್ರತಿದಿನ ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಿದ್ದು, ಅದರ ಬಾಡಿಗೆಯನ್ನೂ ಪಾವತಿಸುತ್ತಿದ್ದಾರೆ. ಶಾಲೆಗೆ ಹೈಟೆಕ್ ಗ್ರಂಥಾಲಯ, ಯುಪಿಎಸ್ ಸೌಲಭ್ಯಗಳನ್ನೂ ಒದಗಿಸಿದ್ದಾರೆ. ಕಳೆದ ೬ ವರ್ಷಗಳಿಂದ ಪ್ರತಿ ತಿಂಗಳು ಶಾಲೆಗೆ ಸುಮಾರು ೭೫ ಸಾವಿರದಷ್ಟು ಹಣವನ್ನು ವ್ಯಯಿಸುತ್ತಿದ್ದು, ಗ್ರಾಮೀಣ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ. ಶಾಲೆಯಲ್ಲಿ ಸಕಲ ಸೌಲಭ್ಯಗಳಿದ್ದು, ಪ್ರಸ್ತುತ ೧ರಿಂದ ೭ನೇ ತರಗತಿವರೆಗೆ ೭೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನಿಂದ ಆಂಗ್ಲಮಾಧ್ಯಮದಲ್ಲಿ ೧ನೇ ತರಗತಿ ಆರಂಭವಾಗಿದ್ದು, ೫ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ೧೯೨೫ರಲ್ಲಿ ಬೇಳೂರು ಪಟೇಲರ ಕುಟುಂಬದ ಸ್ವಂತ ಮನೆಯಲ್ಲಿ ಏಕೋಪಾಧ್ಯಾಯ ಶಾಲೆ ಆರಂಭಗೊAಡಿತು. ೧೯೪೨ರಲ್ಲಿ ಗುಂಡೂರಾವ್ ಅವರ ತಂದೆ ರಾಮರಾವ್ ಅವರು ಈ ಶಾಲೆಗೆ ಅಧ್ಯಾಪಕರಾಗಿದ್ದಾಗ ಗುಂಡೂರಾವ್ ಅವರು ಒಂದನೇ ತರಗತಿ ವ್ಯಾಸಂಗ ಮಾಡಿದರು. ನಂತರ ಬೇಳೂರು ಮಠದ ಆವರಣದ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊAಡಿತು. ಇದೀಗ ಕುಸುಬೂರು ಗ್ರಾಮದ ಬೇಳೂರು ಬಾಣೆಯ ಸಮೀಪ ಸುಸಜ್ಜಿತ ಶಾಲೆ ನೆಲೆನಿಂತಿದೆ. ಅಂದು ೧ನೇ ತರಗತಿ ವ್ಯಾಸಂಗ ಮಾಡಿದ್ದ ಗುಂಡೂರಾವ್ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿಯಾದರು. ೧೯೮೨ರಲ್ಲಿ ಇದೇ ಶಾಲೆಗೆ ಕೊತಾರಿ ಎಸ್ಟೇಟ್‌ನ ವ್ಯವಸ್ಥಾಪಕ ಹೆಗ್ಗಡೆ ಹಾಗೂ ಬೇಳೂರು ಮಹಿಳಾ ಸಂಘದವರು ತಲಾ ಒಂದೊAದು ಕೊಠಡಿಯನ್ನು ನಿರ್ಮಿಸಿಕೊಟ್ಟರು. ಈ ಕೊಠಡಿಗಳನ್ನು ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರು, ಅಂದಿನ ಕೇಂದ್ರ ಸಚಿವ ಜಾಫರ್ ಷರೀಫ್ ಅವರೊಂದಿಗೆ ೧೨.೦೧.೧೯೮೨ರಂದು ಉದ್ಘಾಟಿಸಿದರು. ನಂತರ ೧೯೮೯ರಲ್ಲಿ ಗ್ರಾಮದ ಜೈ ಭಾರತ್ ಯುವಕ ಸಂಘದಿAದ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ, ಉಳಿಕೆ ಹಣದಿಂದ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಸುಮಾರು ೨ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮೈದಾನ, ಕಟ್ಟಡ, ಹೂದೋಟ ಹೊಂದಿರುವ ಶಾಲೆಗೆ ಸರ್ವ ಶಿಕ್ಷಾ ಅಭಿಯಾನದ ಮೂಲಕ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಲಾಯಿತು.

ಇದೀಗ ದ್ವಿಭಾಷಾ ಮಾಧ್ಯಮ ಶಾಲೆಯಾಗಿ ರೂಪುಗೊಂಡಿರುವ ಬೇಳೂರು ಸರ್ಕಾರಿ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ಸೈನ್ಯ, ಅರಣ್ಯ, ವೈದ್ಯಕೀಯ, ಕ್ರೀಡೆ ಸೇರಿದಂತೆ ರಾಜಕೀಯ ರಂಗದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರಮುಖವಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರು ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಬೇಳೂರು ಸರ್ಕಾರಿ ಶಾಲೆಗಿದ್ದರೆ, ಇದರೊಂದಿಗೆ ಕನ್ನಡ ಚಲನಚಿತ್ರ ರಂಗದಲ್ಲಿ ನಟರಾಗಿ, ಪೋಷಕ ನಟರಾಗಿ ಹೆಸರು ಮಾಡಿದ ಜೈಜಗದೀಶ್, ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ರಾಜ್ಯ ನಗರ ನೀರು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯೂ ಆಗಿರುವ ಕೆ.ಪಿ. ಚಂದ್ರಕಲಾ ಅವರೂ ಕೂಡ ಇದೇ ಶಾಲೆಯ ವಿದ್ಯಾರ್ಥಿ.

ಪ್ರಸ್ತುತ ಕ್ಷೇತ್ರದ ಶಾಸಕರಾಗಿರುವ ಡಾ. ಮಂತರ್ ಅವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಶಾಲೆಯನ್ನು ಶತಮಾನೋತ್ಸವ ನೆಪದಲ್ಲಿ ಸುಮಾರು ೩೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನವೀಕರಿಸಲಾಗಿದೆ. ಕಬ್ಬಿಣದ ಮೇಲ್ಛಾವಣಿ, ಕಟ್ಟಡ ದುರಸ್ತಿ, ಸುಣ್ಣಬಳಿಯುವ ಕಾರ್ಯ, ಟೈಲ್ಸ್ ಅಳವಡಿಕೆ ಮಾಡುವ ಮೂಲಕ ಹೊಸ ರೂಪ ನೀಡಲಾಗಿದೆ. ಬೇಳೂರು ಗ್ರಾಮ ಪಂಚಾಯಿತಿಯಿAದ ರೂ. ೫ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನೂತನ ರಂಗಮAಟಪ ನಿರ್ಮಿಸಲಾಗಿದೆ. ಇನ್ನರ್‌ವೀಲ್ ಕ್ಲಬ್‌ನ ಹ್ಯಾಪಿ ಸ್ಕೂಲ್ ಯೋಜನೆಯಡಿ ಒಂದೂವರೆ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಮೈದಾನ, ಕೈತೊಳೆಯುವ ವ್ಯವಸ್ಥೆ, ಅಕ್ವಾ ಗಾರ್ಡ್, ಲೈಬ್ರೆರಿಗೆ ಪುಸ್ತಕಗಳು, ಟೈಲ್ಸ್ಗಳನ್ನು ಒದಗಿಸಲಾಗಿದೆ.

ಹಾಗೆಯೇ ದಾನಿಗಳಾದ ಕೆ.ಎ. ಭಾಗೀರಥಿ ಜಯಕುಮಾರ್ ಅವರು ನೂತನ ಗೇಟ್ ಹಾಗೂ ಕುಸುಬೂರು ಕುಮಾರ್ ಅವರು ಶಾಲೆಯ ಪ್ರವೇಶದ್ವಾರದ ಕಮಾನು ನಿರ್ಮಿಸಿಕೊಟ್ಟಿದ್ದಾರೆ.

ಶತಮಾನೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಶಾಲೆಯಲ್ಲಿಯೇ ಕ್ರೀಡಾಕೂಟ ಆಯೋಜಿಸಿ, ಇದು ನಮ್ಮ ಶಾಲೆ-ನಮ್ಮೂರ ಶಾಲೆಯೆಂಬ ಅಭಿಮಾನ ಮೂಡುವಂತೆ ಮಾಡಲಾಗಿದೆ.

ಸ್ವಾತಂತ್ರö್ಯ ಪೂರ್ವದ ೧೯೨೫ರಲ್ಲಿ ಆರಂಭಗೊAಡ ಬೇಳೂರು ಸರ್ಕಾರಿ ಪ್ರಾಥಮಿಕ ಶಾಲೆ ಇಂದು ೧೦೦ ವರ್ಷದ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದೆ. ೧೯೨೫ರಲ್ಲಿ ಏಕೋಪಾಧ್ಯಾಯ ಶಾಲೆಯಾಗಿ ಆರಂಭಗೊAಡ ಶಾಲೆಯಲ್ಲಿ, ಪ್ರಸ್ತುತ ಪ್ರಭಾರ ಮುಖ್ಯಶಿಕ್ಷಕರಾಗಿ ಕೆ.ಎನ್. ನಿರ್ಮಲ ಕಾರ್ಯನಿರ್ವಹಿಸುತ್ತಿದ್ದು, ಐವರು ಖಾಯಂ ಶಿಕ್ಷಕರು, ಓರ್ವರು ಸ್ಪೋಕನ್ ಇಂಗ್ಲೀಷ್ ಶಿಕ್ಷಕರು, ಓರ್ವರು ಕಂಪ್ಯೂಟರ್ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮಕ್ಕಳಿಗೆ ಬೇಳೂರು ಗ್ರಾಮದ ಚಂದ್ರಮೌಳಿ ಅವರ ಸಹಕಾರದೊಂದಿಗೆ ವಾಹನದ ವ್ಯವಸ್ಥೆ, ಸರ್ಕಾರದಿಂದ ಬಿಸಿಯೂಟ ಸೇರಿದಂತೆ ಪಠ್ಯಪುಸ್ತಕ, ಸಮವಸ್ತçಗಳ ವ್ಯವಸ್ಥೆಯಿದೆ. ಒಟ್ಟಾರೆ ಶತಮಾನೋತ್ಸವ ಸಂಭ್ರಮದಲ್ಲಿರುವ ಶಾಲೆ ಸುಸಜ್ಜಿತವಾಗಿದ್ದು, ಸುತ್ತಮುತ್ತಲ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರ್ವ ರೀತಿಯಲ್ಲೂ ಸೂಕ್ತವಾಗಿ ನೆಲೆನಿಂತಿದೆ.

ಶತಮಾನೋತ್ಸವ ಸಮಾರಂಭವನ್ನು ಯಶಸ್ವಿಗೊಳಿಸಲು ಶತಮಾನೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ, ಶಾಲಾ ಶಿಕ್ಷಕ ವರ್ಗ, ಈ ಭಾಗದ ಗ್ರಾ.ಪಂ. ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಊರಹಬ್ಬ ಎಂಬAತೆ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಜಿ.ಎಸ್. ಪ್ರಭುದೇವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ.ಪಿ. ಕುಮಾರ್ ಉಲ್ಲಾಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಪ್ರಸಾದ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಕೆ.ಜಿ. ಸುರೇಶ್, ಆಹಾರ ಸಮಿತಿಗೆ ಬಿ.ಎನ್. ಬಸವರಾಜು, ಕ್ರೀಡಾ ಸಮಿತಿ ಬಿ.ಎಸ್. ಚಂದ್ರಶೇಖರ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಕೆ.ಎ. ನಿರ್ಮಲ ಅವರುಗಳು ಕಾರ್ಯನಿರ್ವಹಿಸುತ್ತಿದ್ದು, ತಾ. ೭ (ನಾಳೆ) ಮತ್ತು ೮ ರಂದು ಶತಮಾನೋತ್ಸವ ಸಮಾರಂಭ ಜರುಗಲಿದೆ.

- ವಿಜಯ್ ಹಾನಗಲ್