ಮಡಿಕೇರಿ, ನ. ೬: ಆಟೋಗಳ ಪರ್ಮೀಟ್ ವ್ಯಾಪ್ತಿ ಹೆಚ್ಚಳಕ್ಕೆ ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ತೆಕ್ಕಡ ಸಂತೋಷ್ ಕಾರ್ಯಪ್ಪ, ಜಿಲ್ಲೆಯ ಆಟೋ ಚಾಲಕರ ನಿಯೋಗ ಶಾಸಕ ಪೊನ್ನಣ್ಣ ಅವರ ಮೂಲಕ ಸಂಬAಧಪಟ್ಟ ಸಚಿವರ ಬಳಿ ನಿಯೋಗ ತೆರಳಿ ಸದ್ಯ ಓಡಾಟಕ್ಕೆ ಅವಕಾಶವಿರುವ ೧೫ ಕಿ.ಮೀ. ವ್ಯಾಪ್ತಿಯ ಪರ್ಮಿಟ್ ಅನ್ನು ೫೫ ಕಿ.ಮೀ.ಗೆ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿದೆ. ಇದಕ್ಕೆ ಟ್ಯಾಕ್ಸಿ ಚಾಲಕರ ತೀವ್ರ ವಿರೋಧವಿದೆ. ಈಗಾಗಲೇ ಬಾಡಿಗೆ ಬೈಕ್‌ಗಳ ಓಡಾಟದಿಂದ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಸಣ್ಣ ಜಿಲ್ಲೆಯಾಗಿರುವ ಕೊಡಗಿನಲ್ಲಿ ಪರ್ಮಿಟ್ ವ್ಯಾಪ್ತಿ ಹೆಚ್ಚಳ ಮಾಡುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಅಲ್ಲದೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಅನುಮಾನಗಳು ಮೂಡುತ್ತವೆ. ತೆರಿಗೆ, ಇಎಂಐ ಪಾವತಿಸಲು ಟ್ಯಾಕ್ಸಿ ಚಾಲಕರು ಪರದಾಡುತ್ತಿರುವುದು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಆಟೋದವರಿಗೆ ಪರ್ಮಿಟ್ ಹೆಚ್ಚಿಸುವುದರಿಂದ ಟ್ಯಾಕ್ಸಿ ಚಾಲಕರು ಬೀದಿಗೆ ಬೀಳುವಂತಾಗುತ್ತದೆ ಎಂದರು.

ಈ ಸಂಬAಧ ಶಾಸಕರುಗಳ ಬಳಿ ಚರ್ಚಿಸಲಾಗುವುದು. ನಿರ್ಧಾರ ಕೈಗೊಳ್ಳದಂತೆ ಬೇಡಿಕೆ ಸಲ್ಲಿಸಲಾಗುವುದು. ಸ್ಪಂದನ ದೊರೆಯದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಅರಸು ಮುಕ್ಕಾಟಿ, ಕಾವೇರಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಜೆ. ಸತೀಶ್, ಸದಸ್ಯ ಖಾದರ್, ಕಾಫಿನಾಡು ಪ್ರವಾಸಿ ಕಾರು ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಗಗನ್, ಕಾರ್ಯದರ್ಶಿ ಬ್ರಿಜೇಷ್ ಹಾಜರಿದ್ದರು.