ಹೆಬ್ಬಾಲೆ, ನ. ೭: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹೊಸಳ್ಳಿ ಭಾಗದಲ್ಲಿ ಚಿರತೆ ಕಾಣಿಸಿಕೊಂಡು ರೈತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದು, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಬೋನ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಶಿರಂಗಾಲ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ಸಭೆಯಲ್ಲಿ ಸದಸ್ಯ ಎನ್.ಎಂ.ಧರ್ಮಪ್ಪ ಮಾತನಾಡಿ, ಚಿಕ್ಕನಾಯಕನಹಳ್ಳಿಯಲ್ಲಿ ಹಗಲಿನಲ್ಲಿ ಚಿರತೆ ತನ್ನ ಮರಿಗಳೊಂದಿಗೆ ಓಡಾಡುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಇದರಿಂದ ರೈತರು ತಮ್ಮ ಕೃಷಿ ಕಾರ್ಯಗಳಿಗೆ ಜಮೀನಿಗೆ ಹೋಗಲು ಹೆದರುತ್ತಿದ್ದಾರೆ. ಜೊತೆಗೆ ದನಕರುಗಳನ್ನು ಹೊಲದಲ್ಲಿ ಮೇಯಿಸಲು ಹಿಂಜರಿಯುತ್ತಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಭಾಗದಲ್ಲಿ ಬೋನ್‌ಅಳವಡಿಸಿ ಚಿರತೆ ಸೆರೆಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಜವರೇಗೌಡ, ಸುರೇಶ್ ಮಾತನಾಡಿ ಶಿರಂಗಾಲ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಹೆಚ್ಚಾಗಿ ಕೃಷಿಯೊಂದಿಗೆ ಪಶುಸಂಗೋಪನೆ ಕೈಗೊಂಡಿದ್ದಾರೆ. ಆದರೆ ಶಿರಂಗಾಲ ಪಶುಆಸ್ಪತ್ರೆಗೆ ಖಾಯಂ ವೈದ್ಯರಿಲ್ಲದೆ ತುಂಬ ತೊಂದರೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿರಂಗಾಲ ಪಶುಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಹೆಬ್ಬಾಲೆ ಪಶು ಆಸ್ಪತ್ರೆಯ ಡಾ.ಅಮೃತ ಮಾತನಾಡಿ, ತಾಲೂಕಿನ ಕೇವಲ ಇಬ್ಬರೇ ಪಶುವೈದ್ಯರಿದ್ದು, ರೈತರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಸಂದರ್ಭ ಮಾಹಿತಿ ನೀಡಿದರೆ ಖುದ್ದು ಬಂದು ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು. ೧೨ ಲೀಟರ್ ಹಾಲು ನೀಡುವ ಹಸುವಿಗೆ ರೂ.೧.೩೦ ಲಕ್ಷ ಬೆಲೆ ಕೊಟ್ಟು ತರುತ್ತೇವೆ. ವೈದ್ಯರು ವಿಮೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ವರದಿ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜವರೇಗೌಡ ಮನವಿ ಮಾಡಿದರು. ಸದಸ್ಯೆ ಸರಿತಾ ಮಾತನಾಡಿ, ಮಣಜೂರು ಸುತ್ತಮುತ್ತ ಮಂಗಗಳ ಕಾಟ ಜಾಸ್ತಿ ಆಗಿದೆ. ತೆಂಗು, ಬಾಳೆ, ಜೋಳ ಸೇರಿದಂತೆ ರೈತರ ಕೃಷಿಯನ್ನು ಹಾಳುಮಾಡುತ್ತಿವೆ. ಮಂಗಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಿಬ್ಬಂದಿಗಳಿಗೆ ತಿಳಿಸಿದರು.

ಮಣಜೂರು ಕಲಾಭವನ ಕಾಮಗಾರಿ ಮುಗಿದು ಏಳೆಂಟು ವರ್ಷಗಳೇ ಕಳೆದರೂ ಗುತ್ತಿಗೆದಾರರು ಗ್ರಾಮಸ್ಥರಿಗೆ ಹಸ್ತಾಂತರ ಮಾಡಿಲ್ಲ ಎಂದು ಗ್ರಾಮ ಸಮಿತಿ ಅಧ್ಯಕ್ಷ ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಡಿಒ ತಿಳಿಸಿದರು.

ಗ್ರಾಮದ ಸೊತ್ತೆಹಳ್ಳ ರಸ್ತೆ ಸಂಪೂರ್ಣ ಹಾನಿಯಾಗಿದ್ದು, ರೈತರಿಗೆ ತೊಂದರೆ ಆಗಿದೆ. ಈ ರಸ್ತೆಯಲ್ಲಿ ಎತ್ತಿನ ಗಾಡಿಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ವಾಗಿದೆ ಎಂದು ಸಿ.ಎನ್.ಲೋಕೇಶ್ ಅಧಿಕಾರಿಗಳ ಗಮನ ಸೆಳೆದರು. ಈ ಕುರಿತು ನೀರಾವರಿ ಇಲಾಖೆ ಅಧಿಕಾರಿ ಸೌಮ್ಯ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಗ್ರಾಮದ ಮುಖಂಡ ಶ್ರೀನಿವಾಸ್ ಮಾತನಾಡಿ, ಗ್ರಾಮದಲ್ಲಿ ಹಕ್ಕುಪತ್ರ ಇಲ್ಲದ ಕುಟುಂಬಗಳಿಗೆ ಯಾವಾಗ ಹಕ್ಕುಪತ್ರ ನೀಡುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪಿಡಿಓ ಹೇಮಲತಾ ಪ್ರತಿಕ್ರಿಯಿಸಿ ಹಕ್ಕುಪತ್ರ ಇಲ್ಲ ಇಲ್ಲದವರ ಪಟ್ಟಿ ಮಾಡಿ ತಹಶೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ. ತಹಶೀಲ್ದಾರ್ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.

ಮುAದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಜಲಜೀವನ್ ಮಿಷನ್ ಯೋಜನೆ ಪರಿಪೂರ್ಣವಾಗಿಲ್ಲ. ಇದರಿಂದ ಈ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಅಧ್ಯಕ್ಷೆ ಲತಾಬಾಯಿ ಸೂಚನೆ ನೀಡಿದರು.

ಅಭಿವೃದ್ಧಿ ಅಧಿಕಾರಿ ಹೇಮಲತಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಗೆ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕಾಗಿದೆ.ಮೊದಲು ಆಲ್‌ಲೈನ್ ಮೂಲಕ ಮಾಡಲಾಗುತ್ತಿತ್ತು. ಈಗ ಪ್ರತ್ಯೇಕ ತಂತ್ರಾAಶ ಮೂಲಕ ಸಲ್ಲಿಸಬೇಕಾಗಿದೆ. ಗ್ರಾಮಸ್ಥರು ಮತ್ತು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಬೇಕು. ಗ್ರಾಮಸ್ಥರು ಕೂಡ ಅರ್ಜಿ ಸಲ್ಲಿಸಬೇಕು ಎಂದರು. ಪಂಚಾಯಿತಿ ವತಿಯಿಂದ ಕುರಿ, ಕೋಳಿ, ಹಸು ಸಾಕಾಣಿಕೆಗೆ ಕೊಟ್ಟಿಗೆಗೆ ಧನಸಹಾಯ ನೀಡಲಾಗುತ್ತಿದೆ. ರೈತರು ಅರ್ಜಿ ಸಲ್ಲಿಸಬಹುದು ಎಂದರು.

ಗ್ರಾಮಸ್ಥರು ತಮ್ಮ ಕೃಷಿ ಭೂಮಿಯನ್ನು ಮನೆದಳ ಅಂತ ಪರಿವರ್ತನೆ ಮಾಡಿದವರಿಗೆ ಎ ಖಾತಾ ಕೊಡಬಹುದು ಎಂದರು. ಪಂಚಾಯಿತಿ ವತಿಯಿಂದ ಪ್ರಸಕ್ತ ವರ್ಷ ಕಂದಾಯ ಪರಿಷ್ಕರಣೆ ಮಾಡಲಾಗುತ್ತಿದೆ. ಗ್ರಾಮಸ್ಥರು ನಿಗದಿತ ಅವಧಿಯಲ್ಲಿ ಕಂದಾಯ ಪಾವತಿ ಮಾಡಿ ಗ್ರಾಮದ ಅಭಿವೃದ್ಧಿ ಕೈಜೋಡಿಸಬೇಕು ಎಂದು ಹೇಳಿದರು.

ಪಂಚಾಯಿತಿ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಬಂದ ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ನೋಡೆಲ್ ಅಧಿಕಾರಿ ತೋಟಗಾರಿಕಾ ಹಿರಿಯ ನಿರ್ದೇಶಕ ಎನ್.ಎಸ್.ಪಣೇಂದ್ರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಧರ್ಮಪ್ಪ, ಶ್ರೀಕಾಂತ್, ಪ್ರದೀಪ್, ಸರಿತಾ, ಗೀತಾ, ಲಕ್ಷ್ಮಿ ಅಭಿವೃದ್ಧಿ ಅಧಿಕಾರಿ ಹೇಮಲತಾ ಕಾರ್ಯದರ್ಶಿ ಮಂಜೂರು ಖಾನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.