ಮಡಿಕೇರಿ, ನ. ೭: ಜಲ ಜೀವನ್ ಮಿಷನ್ ಬಳಸಿಕೊಂಡು ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨ ಗ್ರಾಮಗಳಿಗೆ ನೀರು ಸಂಪರ್ಕ ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಗ್ರಾ.ಪಂ. ಅಧ್ಯಕ್ಷ ಕುಶನ್ ರೈ ಹರ್ಷ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಗ್ರಾಮದಲ್ಲಿ ಯಶಸ್ವಿ ಕಂಡಿದೆ. ಎಲ್ಲಾ ಕಡೆಯಲ್ಲಿ ಯೋಜನೆ ವಿಫಲವಾಗಿದೆ ಎಂಬ ಮಾತಿದೆ. ಆದರೆ, ನಮ್ಮೂರಿನಲ್ಲಿ ಸಾರ್ವಜನಿಕರ ಸಹಕಾರ, ಆಡಳಿತ, ಅಧಿಕಾರಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ನಿಗದಿತ ಸಮಯದಲ್ಲಿ ನಿರ್ದಿಷ್ಟ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ತಾ. ೬ ರಂದು ಘಟಕವನ್ನು ಸಂಸದ ಯದುವೀರ್ ಒಡೆಯರ್ ಹಾಗೂ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ ತೃಪ್ತಿ ಹೊಂದಿದ್ದು, ಗ್ರಾಮದ ಉಳಿದ ಕಡೆಗಳಲ್ಲಿಯೂ ಇದೇ ರೀತಿ ಕಾಮಗಾರಿ ನಡೆಸಿ ನೀರಿನ ಸಮಸ್ಯೆ ತಲೆದೋರದಂತೆ ಕ್ರಮಕೈಗೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಿಗ್ಗಾಲು ಗ್ರಾಮದಲ್ಲಿ ಮೊದಲು ೭೦ ಮನೆಗಳಿಗೆ ನಲ್ಲಿ ನೀರು ಸಂಪರ್ಕವಿತ್ತು. ಇದೀಗ ಈ ಯೋಜನೆಯಿಂದ ೨೪೯ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕಾಂತೂರು ಭಾಗದಲ್ಲಿ ೪೧೫ ಮನೆಗಳಿಗೆ ನಲ್ಲಿ ನೀರು ಸಂಪರ್ಕವಿತ್ತು. ಪ್ರಸ್ತುತ ೭೨೬ಕ್ಕೆ ಹೆಚ್ಚಿಸಿರುವುದು ಗಮನಾರ್ಹ ಸಾಧನೆ ಎಂದು ವಿಶ್ಲೇಷಿಸಿದ ಕುಶನ್‌ರೈ, ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ನೀರು ಪೂರೈಕೆ ಮಾಡಲಾಗುತ್ತಿದೆ. ಕಾಂತೂರಿನಲ್ಲಿ ೧ ಟ್ಯಾಂಕ್ ನಿರ್ಮಿಸಿ ೩.೫ ಕಿ.ಮೀ. ಪೈಪ್‌ಲೈನ್ ಮೂಲಕ ನೀರು ಸರಬರಾಜಾಗುತ್ತಿದೆ. ಕಿಗ್ಗಾಲಿನಲ್ಲಿ ೫ ಟ್ಯಾಂಕ್ ಇದೆ. ಜೊತೆಗೆ ಸ್ಟೋರೇಜ್, ಫಿಲ್ಟರ್ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ. ಕಾಂತೂರಿನಲ್ಲಿ ೧.೧೩ ಕೋಟಿ, ಕಿಗ್ಗಾಲು ೨.೪೭ ಕೋಟಿ ವೆಚ್ಚದಲ್ಲಿ ಜೆಜೆಎಂ ಅನುಷ್ಠಾನಗೊಂಡಿದೆ ಎಂದು ಮಾಹಿತಿ ನೀಡಿದರು.

ಮುತ್ತಾರ್ಮುಡಿ, ಬಾಡಗ, ಐಕೊಳ, ಕೊಡಂಬೂರು ಭಾಗದಲ್ಲೂ ಕೆಲಸಗಳು ನಡೆಯುತ್ತಿದ್ದು, ೩ ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಅನುಷ್ಠಾನ ಮಾಡಿದರೆ ಜನರಿಗೆ ಪ್ರಯೋಜನವಾಗಲಿದೆ. ಇದರಲ್ಲಿ ವಿಫಲತೆ ಸಾಧ್ಯವಿಲ್ಲ. ಆದರೆ, ನಿರ್ದಿಷ್ಟ ಗುರಿ ಮುಟ್ಟಲು ಇಲ್ಲಿನ ಭೌಗೋಳಿಕ ಚೌಕಟ್ಟು ತೊಡಕಾಗುತ್ತದೆ. ಮೂರ್ನಾಡು ಗ್ರಾ.ಪಂ. ಇದಕ್ಕಾಗಿಯೂ ಕ್ರಮಕೈಗೊಂಡಿದ್ದು, ದೂರದೂರದಲ್ಲಿರುವ ಮನೆಗಳಿಗೆ ಬಾವಿ, ಬೋರ್‌ವೆಲ್ ತೆಗೆದು ನೀರು ನೀಡುವ ಗುರಿಯನ್ನು ಇಟ್ಟುಕೊಂಡಿದೆ ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬಿ.ಎಸ್. ರೇಖಾ, ಸದಸ್ಯರುಗಳಾದ ಸುಮಾ ಸುಂದರ್, ವಿಜು ತಿಮ್ಮಯ್ಯ, ಯಶ್ವಿನ್ ಪೊನ್ನಪ್ಪ, ರೀತಾ ಸುದರ್ಶನ್ ಹಾಜರಿದ್ದರು.