ಮಡಿಕೇರಿ, ನ.೯ : ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದು, ಪ್ರತಿಯೊಬ್ಬರು ಪುಸ್ತಕ ಓದುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.

ಕನ್ನಡ ಭವನ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ ಲೇಖಕಿ ರುಬೀನಾ ಎಂ.ಎ ಅವರ ಚೊಚ್ಚಲ ಕೃತಿ “ಕಣ್ಣಾ ಮುಚ್ಚಾಲೆ” ಬಿಡುಗಡೆಗೊಳಿಸಿ ಶಾಸಕರು ಮಾತನಾಡಿದರು.

ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿದ್ದರು. ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹಿಂದೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಿತ್ತು. ಇಂದು ಅತಿಯಾದ ತಂತ್ರಜ್ಞಾನದ ಬಳಕೆಯಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡ ಭವನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ. ವಾಮನ್‌ರಾವ್ ಬೇಕಲ್ ಅವರು ಮಾತನಾಡಿ, ಅಕ್ಷರ ರೂಪದಲ್ಲಿರುವ ಪುಸ್ತಕಗಳಿಗೆ ಎಂದೂ ಸಾವಿಲ್ಲ. ಪ್ರಪಂಚದಲ್ಲಿ ಸಾಕಷ್ಟು ಪುರಾತನ ಕೋಟೆ ಕೊತ್ತಲಗಳು ನಶಿಸಿಹೋಗಿವೆ. ಆದರೆ ವೇದಶಾಸ್ತç, ಉಪನಿಷತ್ತು, ಬೈಬಲ್, ಕುರಾನ್‌ಗಳ ಮೂಲಕ ಅಕ್ಷರ ಕ್ರೋಢೀಕರಣ ಉಳಿದುಕೊಂಡಿದೆ. ಆದ್ದರಿಂದ ಬರಹಗಾರರು ತಮ್ಮ ಆಶಯಗಳನ್ನು ಅಕ್ಷರ ರೂಪದಲ್ಲಿ ಉಳಿಸಿ, ಮುಂದಿನ ತಲೆಮಾರಿಗೆ ದಾರಿದೀಪವಾಗಬೇಕು ಎಂದರು.

ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಬೆಂಬಲ ನೀಡಬೇಕು. ಸದಾ ಸವಾಲುಗಳ ನಡುವೆ ಬದುಕುವ ಮಹಿಳೆಯರು ಪುಸ್ತಕಗಳನ್ನು ಓದುವ ಮೂಲಕ ಜೀವನ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, “ಕಣ್ಣಾಮುಚ್ಚಾಲೆ” ಕಾದಂಬರಿ ಕುಟುಂಬವೊAದರ ಏಳುಬೀಳಿನ ಹಾದಿಯ ಮೇಲೆ ಬೆಳಕು ಚೆಲ್ಲಿದೆ. ತನ್ನ ಬದುಕನ್ನು ಕಟ್ಟಿಕೊಳ್ಳಲು ಮತ್ತು ಬದುಕಿನ ಗೌರವವನ್ನು ರಕ್ಷಿಸಿಕೊಳ್ಳಲು ಕಥಾ ನಾಯಕಿ ಪಡುವ ಶ್ರಮದ ಹಂದರ ಇದರಲ್ಲಿದೆ. ಜೀವನದ ತೂಗುಯ್ಯಾಲೆಯ ಏರಿಳಿತದ ಪರಿವೇ ಇಲ್ಲದೆ, ಸದಾ ದಾಂಗುಡಿಯಿಡುವ ಸಮಯದ ಜೊತೆ ಹೊಂದಿಕೊಳ್ಳುವ ರಾಧಾಳ ಕಥೆ “ಕಣ್ಣಾ ಮುಚ್ಚಾಲೆ” ಯಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಇಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಕಣ್ಣಾ ಮುಚ್ಚಾಲೆ ಪುಸ್ತಕದ ಹೆಸರೇ ಪ್ರತಿಯೊಬ್ಬರ ಬಾಲ್ಯವನ್ನು ನೆನಪಿಸುತ್ತದೆ. ರುಬೀನಾ ಅವರು ಸರಳ ಭಾಷೆಯಲ್ಲಿ ಹೆಣ್ಣಿನ ಭಾವನೆಯನ್ನು ಪುಸ್ತಕದ ರೂಪದಲ್ಲಿ ಹೊರ ತಂದಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪುಸ್ತಕದ ರೂಪದಲ್ಲಿ ಸಾಹಿತ್ಯವನ್ನು ಓದುವವರ ಸಂಖ್ಯೆ ಕ್ಷೀಣಿಸಿದೆ. ಶುಭ ಸಮಾರಂಭಗಳಲ್ಲಿ ಪ್ರತಿಯೊಬ್ಬರು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಓದಲು ಉತ್ತೇಜನವನ್ನು ನೀಡಬೇಕು ಮತ್ತು ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

‘ಕಣ್ಣಾ ಮುಚ್ಚಾಲೆ’ ಪುಸ್ತಕದ ಲೇಖಕಿ ರುಬೀನಾ ಎಂ.ಎ ಮಾತನಾಡಿ, ಹೆಣ್ಣು ಮಕ್ಕಳ ಬಗ್ಗೆ ಟೀಕೆ ಟಿಪ್ಪಣಿಗಳು ಸಹಜವಾಗಿದ್ದು, ಅದನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು. ಹಲವರ ಸಹಕಾರದಿಂದ ಪುಸ್ತಕ ಲೋಕಾರ್ಪಣೆಗೊಂಡಿದ್ದು, ೬ ವರ್ಷಗಳ ಕನಸು ನನಸಾಗಿದೆ ಎಂದರು. ಮರ್ಕರ ಪೋಸ್ಟ್ ಪತ್ರಿಕೆ ಸಂಪಾದಕ ಜೈರೋಸ್ ಥೋಮಸ್ ಅಲೆಕ್ಸಾಂಡರ್ ಮಾತನಾಡಿ, ಶುಭಹಾರೈಸಿದರು.

ಸನ್ಮಾನ : ಅಂತರರಾಷ್ಟಿçÃಯ ಮಟ್ಟದ ಅಬಾಕಸ್ ಸ್ಫರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಮಿಂಚಿದ ಸಿದ್ದಾಪುರದ ರಿಮ್ಸಾ ಖಾನಂ ಎಂ.ಆರ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಭವನ ಮತ್ತು ಗೆಳೆಯರ ಬಳಗದಿಂದ ಲೇಖಕಿ ರುಬೀನಾ ಎಂ.ಎ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಹಾಗೂ ಪುಸ್ತಕದ ಪುಟ ವಿನ್ಯಾಸಗೊಳಿಸಿದ ಕೆ.ಎಂ. ವಿನೋದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಯತ್ರಿ ಚೆರಿಯಮನೆ ಪ್ರಾರ್ಥಿಸಿ, ಹರ್ಷಿತಾ ಶೆಟ್ಟಿ ಸ್ವಾಗತಿಸಿ, ಕಿಶೋರ್ ರೈ ನಿರೂಪಿಸಿದರು, ಬೊಟ್ಟೋಳಂಡ ನಿವ್ಯ ಕಾವೇರಮ್ಮ ವಂದಿಸಿದರು.