ವೀರಾಜಪೇಟೆ, ನ. ೯: ನಾಡಿನ ಅಭಿವೃದ್ಧಿಗೆ ಐರಿ ಸಮಾಜದವರ ಕೊಡುಗೆಯು ಅಪಾರವಾಗಿದೆ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹೇಳಿದರು.
ವೀರಾಜಪೇಟೆಯ ಅರಮೇರಿ ಗ್ರಾಮದ ಐರಿ ಸಮಾಜದಲ್ಲಿ ವೀರಾಜಪೇಟೆಯ ಐರಿ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಒತ್ತೋರ್ಮೆ ಕೂಟ, ಬೊಡಿ ನಮ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಐರಿ ಸಮಾಜದವರು ಹಲವಾರು ಕಾರ್ಯಕ್ರಮಗಳ ಮೂಲಕ ತಮ್ಮ ಸಮಾಜ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಿರುವುದು ಅಭಿನಂದನಾರ್ಹ. ಸಮಾಜದ ಏಳಿಗೆಗೆ ತನ್ನ ಕೈಲಾದ ಸಹಕಾರ ನೀಡಲು ತಾನು ಸದಾ ಸಿದ್ಧ ಎಂದು ಶಾಸಕರು ಭರವಸೆ ನೀಡಿದರು. ಇದೇ ಸಂದರ್ಭ ಐರಿ ಸಮಾಜದವರು ತಮ್ಮ ಸಮುದಾಯದ ವಿವಿಧ ಬೇಡಿಕೆಗಳನ್ನು ಶಾಸಕರಿಗೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಐರಿ ಸಮುದಾಯದವರು ತಮ್ಮ ಪದ್ಧತಿ ಪರಂಪರೆ ಆಚಾರ ವಿಚಾರಗಳನ್ನು ಸಂಪ್ರ ದಾಯಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಅಪಾರವಿದೆ. ಮುಂದಿನ ದಿನಗಳಲ್ಲಿ ಸಮಾಜದ ಮುಖಾಂತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆ ಯುವಂತಾಗಲಿ ಎಂದು ಆಶಿಸಿದರು. ಇದೇ ಸಂದರ್ಭ ಸಾಧಕರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಹಾಗೂ ಸದಸ್ಯರು, ಆಡಳಿತ ಮಂಡಳಿಯವರು ಹಾಗೂ ಐರಿ ಸಮಾಜದವರು ಉಪಸ್ಥಿತರಿದ್ದರು.