ಮಡಿಕೇರಿ, ನ. ೯: ಕುಟ್ಟದಲ್ಲಿರುವ ಗಿರಿಜನ ಬಾಲಕ-ಬಾಲಕಿಯರ ವಸತಿ ನಿಲಯದಲ್ಲಿ ಹಲವು ಸಮಸ್ಯೆಗಳು ಇರುವ ಬಗ್ಗೆ ಬಂದ ಪುಕಾರಿನ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಕೊಡಗು ಜಿಲ್ಲಾ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ನಿರೀಕ್ಷಕರಾದ ವೀಣಾ ನಾಯಕ್ ನೇತೃತ್ವದ ತಂಡ ವಸತಿ ನಿಲಯದಲ್ಲಿ ಪರಿಶೀಲನೆ ನಡೆಸಿದ ವೇಳೆ ಮಕ್ಕಳ ಕುಂದುಕೊರತೆ ಬಗ್ಗೆ ವಿಚಾರಣೆ ನಡೆಸಲಾಯಿತು. ಈ ಸಂದರ್ಭ ಹಲವಷ್ಟು ಲೋಪ-ದೋಷಗಳು ಕಂಡು ಬಂದಿದ್ದು, ಕೂಡಲೇ ಸರಿಪಡಿಸುವಂತೆ ಹಾಸ್ಟೆಲ್ ವಾರ್ಡನ್ ಸುಶೀಲ ಅವರಿಗೆ ಸೂಚನೆ ನೀಡಲಾಯಿತು.

ತಾ.೫ರಂದು ಬಾಲಕಿಯರ ಮತ್ತು ಬಾಲಕರ ಗಿರಿಜನ ವಸತಿ ನಿಲಯ ಕುಟ್ಟ ಇಲ್ಲಿಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಕೊಡಗು ಜಿಲ್ಲೆಯ ಪೊಲೀಸ್ ನಿರೀಕ್ಷಕರಾದ ವೀಣಾ ನಾಯಕ್‌ರವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿರುತ್ತಾರೆ.

ಪರಿಶೀಲನೆ ವೇಳೆ ಬಾಲಕಿಯರ ಹಾಗೂ ಬಾಲಕರ ವಸತಿ ಗೃಹ ಸ್ವಚ್ಛತೆಯಿಂದ ಕೂಡಿರಲಿಲ್ಲ. ಬಾಲಕಿಯರಿಗೆ ಅಗತ್ಯ ಕಿಟ್ ವಿತರಣೆ ಮಾಡದಿರುವುದು, ಬಾಲಕರ ವಸತಿ ಗೃಹದಲ್ಲಿ ಸಂಜೆಯ ಉಪಹಾರವನ್ನು ಬೇಗನೆ ತಯಾರು ಮಾಡಿ ಇಟ್ಟಿದ್ದು ಕಂಡು ಬಂದಿತ್ತು.

ಬಾಲಕಿಯರ ವಸತಿ ಗೃಹದಲ್ಲಿ ಲೆಕ್ಕಕ್ಕಿಂತ ಅಧಿಕ ರೇಷನ್ ಇರುವುದು ಈ ಸಂದರ್ಭ ಪತ್ತೆಯಾಗಿದೆ. ಬಾಲಕಿಯರ ವಸತಿ ಗೃಹದಲ್ಲಿ ರಾತ್ರಿ ಉಡುಗೆ ಹಾಗೂ ಹೊಸ ಕಂಬಳಿ ಅಧಿಕ ಸಂಖ್ಯೆಯಲ್ಲಿ ಇದ್ದರೂ ಇದನ್ನು ಮಕ್ಕಳಿಗೆ ವಿತರಿಸದೆ ಬೀರುವಿನಲ್ಲಿ ಇಟ್ಟಿದ್ದು ಗೋಚರಿಸಿದೆ.

ಬಾಲಕಿಯರ ವಸತಿ ಗೃಹದಲ್ಲಿ ವಾಷಿಂಗ್‌ಮೆಷಿನ್ ಇದ್ದರೂ ಅದನ್ನು ಉಪಯೋಗಿಸದೆ ಬಾಲಕಿಯರಿಗೆ ಬಟ್ಟೆ ಒಗೆಯಲು ಕೇವಲ ಸೋಪನ್ನು ನೀಡುತ್ತಿರುವುದಾಗಿ ದೂರು ವ್ಯಕ್ತಗೊಂಡಿತು. ಮಕ್ಕಳಿಗೆ ಆಟೋಟ ಸಾಮಾಗ್ರಿಗಳನ್ನು ನೀಡಿರುವುದಿಲ್ಲ. ಅಲ್ಲದೆ ಸ್ನಾನಗೃಹ ಮತ್ತು ಶೌಚಾಲಯವು ಸ್ವಚ್ಛತೆಯಿಂದ ಕೂಡಿರುವುದಿಲ್ಲ. ಬಾಲಕಿಯರ ವಸತಿ ನಿಲಯದ ಕಟ್ಟಡ ಕೆಲಸದ ಸಿಬ್ಬಂದಿಗಳು ಶೌಚಾಲಯವನ್ನು ಉಪಯೋಗಿಸುತ್ತಿರುವುದು ಕಂಡು ಬಂದಿರುತ್ತದೆ. ಶೌಚಾಲಯದ ಒಳಗೆ ಕಾಫಿ ಸೌದೆಯನ್ನು ಇಟ್ಟುಕೊಂಡಿರುವುದು ಕಂಡು ಬಂದಿರುತ್ತದೆ.

ಎಲ್ಲಾ ನ್ಯೂನತೆಯನ್ನು ಸರಿಪಡಿಸಿಕೊಳ್ಳುವಂತೆ ಹಾಸ್ಟೆಲ್ ವಾರ್ಡನ್ ಸುಶೀಲ ಅವರಿಗೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.