ಸೋಮವಾರಪೇಟೆ, ನ.೯: ಕಳೆದ ೬ ವರ್ಷಗಳಿಂದ ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಜಾಗದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿರುವ ರೈತರು, ತಾಲೂಕು ಕಚೇರಿ ಮುಂಭಾಗ ತಾ.೧೦ರಿಂದ (ಇಂದಿನಿAದ) ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ತಲ್ತಾರೆಶೆಟ್ಟಳ್ಳಿ ಗ್ರಾಮ ಸ.ನಂ.೧೮/೯, ೧೧೮/೧೨, ಶುಂಠಿ ಗ್ರಾಮದ ಸ.ನಂ.೨೪/೨೮, ಅಬ್ಬೂರುಕಟ್ಟೆ ಹಿತ್ತಲುಮಕ್ಕಿ ಗ್ರಾಮದ ಸ.ನಂ.೮/೧೩, ತಾಕೇರಿ ಗ್ರಾಮದ ಸ.ನಂ.೧/೪, ಬಸವನಕೊಪ್ಪ ಗ್ರಾಮದ ಸ.ನಂ. ೧/೩, ಚಿಕ್ಕಬ್ಬೂರು ಗ್ರಾಮದ ೩/೩೨, ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ಪೋಡಿ ದುರಸ್ತಿಗಾಗಿ ೨೦೧೮ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೂ ಈವರೆಗೆ ದುರಸ್ತಿ ಆಗಿಲ್ಲ ಎಂದು ರೈತಪರ ಹೋರಾಟಗಾರ ಬಿ.ಪಿ. ಅನಿಲ್ಕುಮಾರ್ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ೨೦೨೩ರಲ್ಲಿ ತಾಲೂಕು ಕಚೇರಿ ಎದುರು ೨ ಬಾರಿ ಧರಣಿ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಡಾ.ಮಂತರ್ಗೌಡ, ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಭೇಟಿ ನೀಡಿ ಒಂದು ತಿಂಗಳ ಒಳಗೆ ಪೋಡಿ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ದುರಸ್ತಿ ಆಗಿರುವುದಿಲ್ಲ ಎಂದು ಅನಿಲ್ ಕುಮಾರ್ ದೂರಿದ್ದಾರೆ.
ಕಂದಾಯ ಇಲಾಖೆಯಲ್ಲಿ ಬಡ ರೈತರ ಕೆಲಸಗಳು ಉಚಿತವಾಗಿ ಆಗುತ್ತಿಲ್ಲ. ಪೋಡಿ ದುರಸ್ತಿ ಆಗುವ ತನಕ ಆಹೋರಾತ್ರಿ ಧರಣಿ ನಡೆಯಲಿದೆ. ಕಂದಾಯ ಇಲಾಖೆಯ ಶೋಷಣೆಯಿಂದ ರೈತರಿಗೆ ಅನಾಹುತವಾದರೆ ಕಂದಾಯ ಇಲಾಖೆಯೇ ನೇರ ಹೊಣೆ ಹೊರಬೇಕು ಎಂದು ರೈತರಾದ ಬಿ.ಸಿ.ಪೃಥ್ವಿ, ಬಿ.ಎಂ.ಮೋಹನ್, ಬಿ.ಡಿ.ಚಂಗಪ್ಪ, ಬಿ.ಎಂ.ಸೋಮಯ್ಯ, ಬಿ.ಪಿ. ಪೊನ್ನಪ್ಪ, ಬಿ.ಜಿ.ನಾಡಪ್ಪ ಅವರುಗಳು ಎಚ್ಚರಿಸಿದ್ದಾರೆ. ಈ ವಿಷಯದ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೂ ಪತ್ರ ಸಲ್ಲಿಸಿದ್ದು, ಈವರೆಗೆ ಸ್ಪಂದನ ಲಭಿಸಿಲ್ಲ ಎಂದು ಆರೋಪಿಸಿದ್ದಾರೆ.