ಗೋಣಿಕೊಪ್ಪಲು, ನ. ೧೦: ಜನಪ್ರತಿನಿಧಿಗಳಿಗೆ ಜನರ ವಿಶ್ವಾಸ, ಬೆಂಬಲವಿದ್ದರಷ್ಟೇ ಅಧಿಕಾರ ನಡೆಸಬಹುದು, ಕೊಡಗಿನಲ್ಲಿ ಕಳೆದೆರಡು ವರ್ಷಗಳಿಂದ ಯಾವುದೇ ಕೋಮು ಸಂಘರ್ಷವಿಲ್ಲದೆ ಎಲ್ಲ ವರ್ಗದ ಜನರು ಪರಸ್ಪರ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿರುವುದು ನೋಡಬಹುದಾಗಿದೆ. ಆಯಾಯ ಜನಾಂಗದ ಆಚಾರ ವಿಚಾರಗಳಿಗೆ ಯಾರೂ ಕೂಡ ಧಕ್ಕೆ ತರಬಾರದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯ ಪಟ್ಟರು.
ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್ ಅನ್ನು ಉದ್ಘಾಟಿಸಿ, ನೂತನ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ನಂತರ ಬಡಜನರ, ಶೋಷಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ದಲಿತರ ಹಾಗೂ ಎಲ್ಲಾ ವರ್ಗದ ಜನಾಂಗದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಆರೋಗ್ಯ, ಕ್ರೀಡೆ, ಸೇರಿದಂತೆ ಹಲವಾರು ವೈಯಕ್ತಿಕ ಸಮಸ್ಯೆಗಳನ್ನು ಪ್ರಮುಖವಾಗಿ ಬಡವರಿಗೆ ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ. ಆ ಬಗ್ಗೆ ಸಾರ್ಥಕತೆ ಹೊಂದಿದ್ದೇನೆ ಎಂದರು.
ಕೊಡಗಿನಲ್ಲಿ ಸಾಕಷ್ಟು ಬಡತನವಿರುವುದನ್ನು ಗಮನಿಸಿದ್ದೇನೆ. ಬಹುತೇಕರು ಒಂದು ಏಕರೆಗೂ ಕಡಿಮೆ ಇರುವ ಭೂಮಿಯಲ್ಲಿ ಜೀವನ ಸಾಗಿಸುತ್ತಿರುವುದು ಹತ್ತಿರದಿಂದ ಗಮನಿಸಿದ್ದೇನೆ. ವಿಧಾನಸೌಧದಲ್ಲಿ ಹಲವು ಸಮುದಾಯಗಳ ಮುಖಂಡರನ್ನು ಕರೆದೊಯ್ದು ಮಂತ್ರಿಗಳ ಬಳಿ ಮಾತನಾಡಿಸಿದ ವೇಳೆ ಈ ವಿಚಾರವನ್ನು ಸಚಿವರಿಗೆ ಮನದಟ್ಟು ಮಾಡಿದ್ದೇನೆ.
ಬೆಂಗಳೂರಿನಲ್ಲಿರುವ ಹಲವು ಗಣ್ಯರು ಕೊಡಗಿನ ಜನರನ್ನು ಶ್ರೀಮಂತರೆAದು ನಂಬಿದ್ದಾರೆ.ಆದರೆ ಇಲ್ಲಿಯ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕೊಡಗು ಎಂದ ತಕ್ಷಣ ಕಾಫಿ ಬೆಳೆ, ತೋಟ ಇತ್ಯಾದಿಗಳು ಇವೆ ಎಂಬುವುದು ಅವರ ನಂಬಿಕೆಯಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಇಲ್ಲಿರುವ ಬಡತನ, ರೈತರ ಬೆಳೆಗಾರರ ಸಮಸ್ಯೆ, ದೀನ ದಲಿತರ, ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಉನ್ನತ ಮಟ್ಟದಲ್ಲಿ ಗಮನ ಹರಿಸುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ ಎಂದು ಹೇಳಿದರು.
ಕೊಡಗಿನಲ್ಲಿ ರಸ್ತೆಗಳ ಸಮಸ್ಯೆ ಗಂಭೀರವಾಗಿದೆ. ಮಳೆಯ ಕಾರಣ ರಸ್ತೆಗಳು ಹಾಳಾಗಿವೆ. ಕೆಲಸ ನಿರ್ವಹಿಸಲು ಮಳೆ ಅಡ್ಡಿ ಪಡಿಸಿದೆ. ರಸ್ತೆ ದುರಸ್ತಿಗಾಗಿ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನವನ್ನು ಈಗಾಗಲೇ ನೀಡಿದ್ದಾರೆ. ಟೆಂಡರ್ ಪ್ರಕ್ರಿಯೆಗಳು ಮುಗಿದಿವೆ. ಮುಂದಿನ ದಿನಗಳಲ್ಲಿ ಕೆಲಸಗಳು ಆರಂಭವಾಗಲಿದೆ. ಮಾಡಿದ ಕೆಲಸವನ್ನು ಜನರು ಪ್ರಶಂಸಿಸಬೇಕು.
ಜಿಲ್ಲೆಯ ಅಭಿವೃದ್ದಿಗಾಗಿ, ವಿಶೇಷವಾಗಿ ಕ್ಷೇತ್ರದ ಅಭಿವೃದ್ದಿಗಾಗಿ ಸಾಕಷ್ಟು ಕೆಲಸಗಳು ಸಾಗುತ್ತಲೇ ಇವೆ. ಈಗಾಗಲೇ ಹುದಿಕೇರಿ, ಗೋಣಿಕೊಪ್ಪ, ಹಾಗೂ ವೀರಾಜಪೇಟೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು, ವಿದ್ಯುತ್ಚಕ್ತಿಗೆ ೧೩೦ ಕೋಟಿ ಅನುದಾನವನ್ನು ಬಳಕೆ ಮಾಡಿರುವುದು. ಪೊನ್ನಂಪೇಟೆ ತಾಲೂಕಿಗೆ ನೂತನ ತಾಲೂಕು ಕಚೇರಿ ಕಾಮಗಾರಿಗೆ ಚಾಲನೆ ನೀಡಿರುವುದು,
ಪುರಸಭೆ ಕಟ್ಟಡ, ಗೋಣಿಕೊಪ್ಪ ಬಸ್ ನಿಲ್ದಾಣ ಭಾಗಮಂಡಲದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳು ಸೇರಿದಂತೆ ಹತ್ತಾರು ಕಾಮಗಾರಿಗಳು ನಡೆಯುತ್ತಲೇ ಇವೆ ಎಂದು ಮಾಹಿತಿ ನೀಡಿದರು.
ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಕೊಡಗಿನ ಎಲ್ಲಾ ಸಮುದಾಯಗಳು ಅಭಿವೃದ್ದಿಯ ಕೆಲಸವನ್ನು ಮನಗಂಡು ನನ್ನೊಂದಿಗಿದ್ದಾರೆ. ಎಲ್ಲಾ ಸಮುದಾಯದ ಏಳಿಗೆಗೋಸ್ಕರ ಜನಪ್ರತಿನಿಧಿಯಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಕೂಡ ಜೀವನ ಸಾಗಿಸಬೇಕು ಎಂಬುದೇ ನನ್ನ ಬಯಕೆಯಾಗಿದೆ. ಆ ನಿಟ್ಟಿನಲ್ಲಿ ನಿಮ್ಮ ಸಹಕಾರ ನನಗೆ ಸದಾ ಇರಲಿ ಎಂದು ಆಶಿಸಿದರು.
ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಎ.ಜೆ. ಬಾಬು ಪ್ರಾಸ್ತವಿಕವಾಗಿ ಮಾತನಾಡಿ, ಸಮುದಾಯದ ಒಗ್ಗಟ್ಟಿಗಾಗಿ ಕಳೆದ ಒಂದು ವರ್ಷದಿಂದ ಶ್ರಮಿಸುತ್ತಿದ್ದೇವೆ. ಇದರ ಫಲವಾಗಿ ಇದೀಗ ಸಮುದಾಯ ಬಾಂಧವರು ಒಂದೆಡೆ ಸೇರುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಜನಪ್ರತಿನಿಧಿಗಳ ಮುಂದೆ ನಿಂತಿದ್ದೇವೆ. ಸರ್ಕಾರದ ಸವಲತ್ತುಗಳು ಎಲ್ಲರಿಗೂ ಸಿಗುವಂತಾಗಲಿ, ಕ್ಷೇತ್ರದ ಶಾಸಕರು ಸಮುದಾಯ ಅಭಿವೃದ್ದಿಗಾಗಿ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಮುಂದೆಯೂ ನೀಡುವ ವಿಶ್ವಾಸ ಹೊಂದಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಪ್ರಾಂಶುಪಾಲ ಫಾ. ಮದಲೈ, ಬೆಂಗಳೂರಿನ ಫಾ. ಎ.ಜೆ.ಟೋನಿ, ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹಾಗೂ ವಿವಿಧ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮಗುರುಗಳಿಗೆ ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಸಿಸ್ಟರ್ ಟೆನ್ಸಿ ಮದರ್, ಫಾದರ್ ಟೋನಿ, ಸಿಸ್ಟರ್ ತೆರೆಸಾ ಹ್ಯಾನ್, ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಸಿ.ಸಿ. ವಿನ್ಸೆಂಟ್, ಪ್ರಧಾನ ಕಾರ್ಯದರ್ಶಿ ಸಿ.ಜೆ. ಆಂ್ಯಟೊ, ಜಂಟಿ ಕಾರ್ಯದರ್ಶಿ ಆಂಟೋನಿ ಜೋಸೆಫ್, ಖಜಾಂಚಿ ಬೇಬಿ ಜಾರ್ಜ್, ನಿರ್ದೇಶಕರುಗಳಾದ ಆಂಟೋನಿ ರಾಬಿನ್, ಎಂ.ಎA. ಥಾಮಸ್, ಪಿ.ವಿ. ವರ್ಗಿಸ್, ಡಾಡೂ ಜೋಸೆಫ್, ಸ್ಟಾನ್ಲಿ, ಕ್ಲಿಟಸ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಲಿತ ಕ್ಲೀಟಸ್ ಪ್ರಾರ್ಥಿಸಿ, ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್ ನಿರ್ದೇಶಕ ವಿಲ್ಸನ್ ಸ್ವಾಗತಿಸಿ, ಪದಾಧಿಕಾರಿಗಳಾದ ಶೀಭಾ ಬೆನ್ನಿ, ಶರ‍್ಲಿ ರಾಜನ್ ನಿರೂಪಿಸಿ,ರೀಟಾ ಆ್ಯಂಟೋ ವಂದಿಸಿದರು.