ಸೋಮವಾರಪೇಟೆ, ನ.೧೪ : ಡಿಸೆಂಬರ್ ಅಂತ್ಯದೊಳಗೆ ರೈತರಿಗೆ ಸಂಬAಧಿಸಿದ ಎಲ್ಲಾ ದುರಸ್ತಿ ಕಡತಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ. ಈಗಾಗಲೇ ೬೦೦ ರೈತರ ಆರ್‌ಟಿಸಿ ವಿತರಣೆಗೆ ಸಿದ್ಧವಾಗಿದೆ. ಮಾದಾಪುರವನ್ನು ಹೋಬಳಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ ಎಂದು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಹೇಳಿದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯಿಂದ ಕೆಲ ತಿಂಗಳ ಹಿಂದೆ ವಿವಿಧ ಬೇಡಿಕೆಗಳ ಪಟ್ಟಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದ್ದು, ಇದರ ಕಾರ್ಯಸಾಧನೆಯ ಬಗ್ಗೆ ಮಾಹಿತಿ ಪಡೆಯಲು ಸಮಿತಿಯ ಪದಾಧಿಕಾರಿಗಳು ಇಂದು ತಹಶೀಲ್ದಾರ್‌ರನ್ನು ಕಚೇರಿಯಲ್ಲಿ ಭೇಟಿ ಮಾಡಿ ಚರ್ಚಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ, ರೈತರ ಕಡತಗಳು ನಿರೀಕ್ಷಿತ ಸಮಯದಲ್ಲಿ ದುರಸ್ತಿ ಆಗುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಮಾದಾಪುರವನ್ನು ಹೋಬಳಿ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ ನಾಡಕಚೇರಿ ಸ್ಥಾಪಿಸುವಂತೆ ಮನವಿ ಮಾಡಿದ್ದರೂ ಈವರೆಗೆ ಕ್ರಮವಾಗಿಲ್ಲ ಎಂದರು.

ಇದರೊAದಿಗೆ ಸೆಕ್ಷನ್ ೪ ಹಾಗೂ ಸಿ ಮತ್ತು ಡಿ ಜಾಗವನ್ನು ಸರ್ಕಾರ ಸರ್ವೆ ಮಾಡುತ್ತಿದೆ. ಸರ್ವೆ ಇಲಾಖೆ ಮತ್ತು ತಹಶೀಲ್ದಾರ್ ಸೇರಿ ಜಂಟಿ ಸರ್ವೆ ಮಾಡುವಾಗ ಜನಪ್ರತಿನಿಧಿಗಳು, ಸ್ಥಳೀಯರಿಗೆ ತಿಳಿಸುವಂತೆ ಮನವಿ ಮಾಡಿದ್ದರೂ ಗಣನೆಗೆ ತೆಗೆದುಕೊಂಡಿಲ್ಲ. ಗ್ರಾಮಗಳ ಗಡಿ ಗುರುತು, ಸೆಟಲ್ ಮೆಂಟ್ ಸರ್ವೆ ಮಾಡಿಲ್ಲ. ಒನ್ ಟು ಫೈವ್ ಮಾಡಿಲ್ಲ. ದುರಸ್ತಿ ಅರ್ಜಿಗಳು ಸೀನಿಯಾರಿಟಿ ಪ್ರಕಾರ ಮಾಡಬೇಕು. ಮೊದಲು ಅರ್ಜಿ ಕೊಟ್ಟವರ ಅರ್ಜಿಯನ್ನು ವಿಲೇ ಮಾಡಬೇಕು. ಈ ಎಲ್ಲಾ ವಿಷಯಗಳ ಬಗ್ಗೆ ಈ ಹಿಂದೆಯೇ ತಮ್ಮ ಗಮನ ಸೆಳೆಯಲಾಗಿದೆ ಎಂದು ಅರುಣ್ ಹೇಳಿದರು.

ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಕೃಷ್ಣಮೂರ್ತಿ ಅವರು, ಸುಮಾರು ೬೦೦ ರೈತರ ಆರ್.ಟಿ.ಸಿ. ಸಿದ್ದವಾಗಿದೆ. ಕಡತದ ಭೂ ಮಂಜೂರಾತಿ ಆದೇಶ ಪತ್ರ, ವಿತರಣೆಯ ರಿಜಿಸ್ಟರ್‌ಗಳ ಆಧಾರದ ಮೇಲೆ ಬಗರ್‌ಹುಕುಂ ತಂತ್ರಾAಶದ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಈಗಾಗಲೇ ೧೩೪ ಸ.ನಂ. ರಲ್ಲಿ ೬೦೦ ರೈತರಿಗೆ ಆರ್.ಟಿ.ಸಿ. ನೀಡಲು ಕ್ರಮವಹಿಸಲಾಗಿದೆ. ೮೬ ಸ.ನಂ.ಗಳನ್ನು ಸಿ. ಮತ್ತು ಡಿ. ಹಿನ್ನೆಲೆ ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ ಎಂದರು. ಈ ಹಿಂದೆ ಊರುಡುವೆ, ಸೆಕ್ಷನ್ ೪ರಲ್ಲಿ ಇರುವ ಜಾಗಗಳನ್ನೂ ಫಲಾನುಭವಿಗಳಿಗೆ ನೀಡಲಾಗಿದೆ. ಈ ಗೊಂದಲ ಬಗೆಹರಿಸಲು ಅರಣ್ಯ ಇಲಾಖೆಯೊಂದಿಗೆ ಪ್ರಯತ್ನ ಸಾಗಿದೆ. ದುರಸ್ತಿ ಕಡತಗಳನ್ನು ಅಕ್ಟೋಬರ್ ಅಂತ್ಯದ ಒಳಗೆ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿತ್ತು. ಆದರೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆ ನಿರೀಕ್ಷಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ತಹಶೀಲ್ದಾರ್ ಹೇಳಿದರು.

ಡಿಸೆಂಬರ್ ಅಂತ್ಯದೊಳಗೆ ದುರಸ್ತಿ ಸಂಬAಧಿತ ಎಲ್ಲಾ ಪ್ರಕ್ರಿಯೆ ಮುಗಿಯುತ್ತದೆ. ದುರಸ್ತಿಗೆ ಕೆಲವೊಂದು ಹಳೆ ಕಡತಗಳು ಸಿಗುತ್ತಿಲ್ಲ. ಇಂತಹ ಕಡತಗಳನ್ನು ಹುಡುಕಲಾಗುತ್ತಿದೆ. ಕೆಲವೊಂದು ಸ.ನಂ.ಗಳಿಗೆ ಸೇರಿದ ದಾಖಲಾತಿಗಳ ಕೊರತೆಯಿದೆ. ಇಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ಕಚೇರಿ, ಹೆಚ್.ಆರ್.ಪಿ. ಕಚೇರಿಯಲ್ಲೂ ಕಡತ ಹುಡುಕುತ್ತಿದ್ದೇವೆ. ಮಾದಾಪುರ ಹೋಬಳಿ ವಿಚಾರವೂ ಇಲಾಖೆಯ ಮುಂದಿದೆ. ಮುಂದಿನ ಜನಗಣತಿ ಮುಗಿದ ನಂತರ ಈ ಬಗ್ಗೆ ಕ್ರಮವಹಿಸಲಾಗುತ್ತದೆ. ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬರುವ ಬಗ್ಗೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಕಾನೂನಿನ ಚೌಕಟ್ಟಿನೊಳಗೆ ರೈತರಿಗೆ ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ತಾಲೂಕು ರೈತ ಹೋರಾಟ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಶ್ರೀನಿಧಿ ಲಿಂಗಪ್ಪ, ಹೂವಯ್ಯ ಮಾಸ್ಟರ್, ವಸಂತ್, ಸುಧಿನ್, ಹೊಸಳ್ಳಿ ರಾಜೇಶ್, ಬಿಳಿಕಿಕೊಪ್ಪ ಹರೀಶ್, ಮೋಹಿತ್ ತಿಮ್ಮಯ್ಯ, ಕೂಗೂರು ಸಂದೀಪ್ ಸೇರಿದಂತೆ ಇತರರು ಇದ್ದರು.