ಕಣಿವೆ, ನ. ೧೪: ಎಲ್ಲಾ ಸಂಪಾದನೆಗಳಿಗಿAತಲೂ ಶಿಕ್ಷಣದ ಜ್ಞಾನ ದೇಶದ ಬಹು ದೊಡ್ಡ ಸಂಪತ್ತು ಎಂದು ಸುತ್ತೂರು ಮಹಾಸಂಸ್ಥಾನದ ಜಗದ್ಗುರು ಡಾ. ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಶಿಸಿದರು.

ಕೊಪ್ಪ ಸಮೀಪದ ಗುಡ್ಡೇನಹಳ್ಳಿಯಲ್ಲಿ ಇರುವ ನಳಂದ ಗುರುಕುಲ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ನರ್ಸರಿ ವಿಭಾಗದ ಅತ್ಯಾಕರ್ಷಕ ಶಾಲಾ ಸಮುಚ್ಚಯವನ್ನು ಲೋಕಾರ್ಪಣೆಗೊಳಿಸಿ ಅವರು ಆಶೀವÀðಚನ ನೀಡಿದರು.

ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ನೈತಿಕ ಮೌಲ್ಯಗಳೊಂದಿಗೆ ಗುಣಾತ್ಮಕ ಶಿಕ್ಷಣಕ್ಕೆ ನಳಂದ ಗುರುಕುಲ ಮುಂದಾಗಿರುವುದು ಶ್ಲಾಘನೀಯ. ತಮಿಳುನಾಡು ರಾಜ್ಯದವರಾದರೂ ಕೂಡ ಕೊಡಗು ಜಿಲ್ಲೆಗೆ ಬಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಂತಹ ಲೆವಿಸ್ಟಾ ಕಾಫಿ ಕಂಪೆನಿ ಸ್ಥಾಪಿಸುವ ಮೂಲಕ ಸಾವಿರಾರು ಕನ್ನಡಿಗರಿಗೆ ಉದ್ಯೋಗ ನೀಡಿರುವ ಸಾತಪ್ಪನ್ ಅವರು ಕೊಡಗಿನ ಹೆಮ್ಮೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಕಾರ್ಯಕ್ರಮ ನಡೆಸಿಕೊಟ್ಟ ಎಲ್ ಕೆ ಜಿ ಮಕ್ಕಳ ಆತ್ಮವಿಶ್ವಾಸವನ್ನು ಪ್ರಶಂಶಿಸಿದ ಶ್ರೀಗಳು ನಳಂದ ಗುರುಕುಲ ಒಂದೇ ಸೂರಿನಡಿ ಸಮಗ್ರ ಶಿಕ್ಷಣವನ್ನು ನೀಡುವಂತೆ ಹೆಮ್ಮರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು. ನಳಂದ ಗುರುಕುಲ ಸಂಸ್ಥೆಯ ಛೇರ್ಮನ್ ಎನ್.ಸಾತಪ್ಪನ್ ಮಾತನಾಡಿ, ಕೊಡಗು, ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾದರಿ ಎನ್ನಬಹುದಾದ ಈ ಶಾಲಾ ಕಟ್ಟಡ ಆಗಷ್ಟೇ ಶಾಲೆಗೆ ಪದಾರ್ಪಣೆ ಮಾಡುವ ಪುಟ್ಟ ಮಕ್ಕಳ ಸರ್ವತೋಮುಖ ಪ್ರಗತಿಗೆ ಬೇಕಾದ ಎಲ್ಲಾ ರೀತಿಯ ಆಧುನಿಕ ಸೌಕರ್ಯಗಳನ್ನು ಹೊಂದಿದೆ.

ಇತ್ತೀಚಿನ ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಬೇಕಾದ ಅಗತ್ಯ ಜ್ಞಾನ, ಸಂಸ್ಕಾರ ಹಾಗೂ ಸಂಪ್ರದಾಯಗಳನ್ನು ಸಹ ಕಲಿಸಲಾಗುವುದು. ಎಳೆಯ ಮಕ್ಕಳ ಮೂಲ ಶಿಕ್ಷಣ ನರ್ಸರಿಯಿಂದಲೇ ಆರಂಭವಾಗುವ ಕಾರಣ ಆಮದು ಮಾಡಿಕೊಂಡ ವಸ್ತುಗಳನ್ನು ಒಳಗೊಂಡ ಕಲಾತ್ಮಕ ಚಟುವಟಿಕೆಯ ಕೊಠಡಿಗಳು, ಉತ್ತಮ ಸಂವಹನಾ ಕೌಶಲಗಳಿಗಾಗಿ ಆಧುನಿಕ ಪರದೆಯನ್ನು ಒಳಗೊಂಡ ಆಕರ್ಷಕ ಕಲಿಕಾ ಮಂದಿರ, ಸಹಪಠ್ಯ ಚಟುವಟಿಕೆಗಳನ್ನು ನಡೆಸಲು ಅನುಗುಣವಾದ ವಿಶಾಲವಾದ ಒಳಾಂಗಣ ವೇದಿಕೆ, ಶಾಲಾ ಕಟ್ಟಡದೊಳಗೆ ಸುರಕ್ಷಿತ ವ್ಯವಸ್ಥೆಗಳನ್ನು ಹೊಂದಿದ ಈಜುಕೊಳ, ಜೀವನ ಕೌಶಲ್ಯಗಳನ್ನು ಕಲಿಸುವ ಅಂದ - ಚೆಂದದ ಪ್ರಯೋಗಾಲಯ, ಡಿಜಿಟಲ್ ಕಲಿಕಾ ವ್ಯವಸ್ಥೆಯೊಂದಿಗೆ ರೋಮಾಂಚಕವಾದ ತರಗತಿ ಕೊಠಡಿಗಳು, ಉತ್ತಮ ವೈದ್ಯಕೀಯ ಸೌಲಭ್ಯಗಳು, ವಿಶ್ರಾಂತಿ ಕೊಠಡಿ ಹೀಗೆ ಹತ್ತಾರು ಮಾದರಿಗಳನ್ನು ಶಾಲಾ ಕಟ್ಟಡದೊಳಗೆ ಅನುಷ್ಠಾನಗೊಳಿಸಲಾಗಿದೆ ಎಂದು ಸಾತಪ್ಪನ್ ವಿವರಿಸಿದರು.

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಲೆವಿಸ್ಟಾ ಕಾಫಿ ವ್ಯವಸ್ಥಾಪಕ ನಿರ್ದೇಶಕ ವೆಂಕಟಾಚಲ, ಶಾಲಾ ವಿಭಾಗದ ಪ್ರಾಂಶುಪಾಲ ಡಾ.ಸಿ.ಅಂಥೋಣಿ ರಾಜ್ ಶ್ರೀಗಳನ್ನು ಪರಿಚಯಿಸಿದರು. ಕಾಲೇಜು ವಿಭಾಗದ ಪ್ರಾಂಶುಪಾಲ ಶಾಜಿ ಅಲುಂಗ್ನಲ್ ಜೋಸೆಫ್, ರೆಸಿಡೆನ್ಷಿಯಲ್ ನಿರ್ದೇಶಕರಾದ ನ್ಯಾಮ್ ಗಿಲ್ ನೊಡ್ಯುಪ್, ನಿರ್ದೇಶಕ ದೇವಿ ಪೂಣಚ್ಚ, ಸಲಹೆಗಾರ ಎಫ್.ಎ.ಎಸ್.ಸುರೇಂದರ್, ಆಡಳಿತಾಧಿಕಾರಿ ಓಂಪ್ರಕಾಶ್ ಇದ್ದರು. ಶಾಲಾ ವಿಭಾಗದ ಶಿಕ್ಷಕಿ ಸಿಂಧು, ಶಿಕ್ಷಕಿ ಟೀನಾ ನಿರೂಪಿಸಿದರು. ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯಗಳು ಜರುಗಿದವು. ಸಂಸ್ಥೆಯ ಆವರಣದಲ್ಲಿ ಸುತ್ತೂರು ಶ್ರೀಗಳು ಆಗಮಿಸಿದಾಗ ಪೂರ್ಣಕುಂಭದೊAದಿಗೆ ಮಂಗಳ ವಾದ್ಯ ಹಾಗೂ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಜೊತೆಗೆ ಶ್ರೀಗಳನ್ನು ಸ್ವಾಗತಿಸಲಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ಕರ ಮುಗಿದು ನಿಂತ ವಿದ್ಯಾರ್ಥಿಗಳು ಶ್ರೀಗಳ ಪಾದಗಳಿಗೆ ಪುಷ್ಪನಮನ ಸಲ್ಲಿಸಿದರು.