ಗೋಣಿಕೊಪ್ಪಲು, ನ. ೧೪: ಮುಂದಿನ ಅಧೀವೆಶನದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ರೂಪುಗೊಳ್ಳಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಗ್ರಾಮ ಪಂಚಾಯಿತಿ ನಿರ್ಣಯ ಕೈಗೊಂಡಿದೆ. ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡಲ್ಲಿ ನಗರದಲ್ಲಿ ಎರಡು ಬದಿಯಲ್ಲಿಯೂ ಒಳ ಚರಂಡಿ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಲು ಅವಕಾಶವಿದೆ. ಈ ವೇಳೆ ರಸ್ತೆಯ ಎರಡು ಬದಿಯಲ್ಲಿಯೂ ವಾಹನ ನಿಲುಗಡೆಗೆ ಹೆಚ್ಚಿನ ಸ್ಥಳ ಲಭ್ಯವಾಗಲಿದೆ ಎಂದು ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ ಹೇಳಿದರು.

ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ಸಂಸ್ಥೆ ಸ್ಥಾನೀಯ ಸಮಿತಿ ಗೋಣಿಕೊಪ್ಪ ಹಾಗೂ ದಿ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರದಲ್ಲಿರುವ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಎಸ್.ಅರುಣ್ ಮಾಚಯ್ಯನವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ. ನಾಗರಿಕರ ಪ್ರೋತ್ಸಾಹ ಇದ್ದಲ್ಲಿ ಮಾತ್ರ ಅಭಿವೃದ್ಧಿ ಕೆಲಸ ಮುನ್ನಡೆಯಲು ಸಾಧ್ಯವಾಗಲಿವೆ. ಕ್ಷೇತ್ರದ ನಾನಾ ಕಡೆಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಪ್ರಯತ್ನ ನಡೆಯುತ್ತಿದೆ. ಆದರೆ ಕೆಲವು ಮಂದಿ ಇಂತಹ ಯೋಜನೆಗಳಿಗೆ ಅನವಶ್ಯಕ ಅಡ್ಡಗಾಲು ಹಾಕುತ್ತಿರುವುದು ಕಂಡು ಬರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ನಿರೀಕ್ಷೆ ಅಪಾರವಾಗಿದೆ. ಇವರ ನಿರೀಕ್ಷೆಯನ್ನು ಹುಸಿಗೊಳ್ಳದಂತೆ ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಸಲುವಾಗಿ ವೀರಾಜಪೇಟೆ ಬಳಿಯ ಮಲೆತಿರಿಕೆ ಬೆಟ್ಟದ ಬಳಿ ಪರಿಸರಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವ್ಯೂ ಪಾಯಿಂಟ್ ಮಾಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಅನವಶ್ಯಕವಾಗಿ ಯೋಜನೆಯನ್ನು ಅರ್ಥ ಮಾಡಿಕೊಳ್ಳದ ಕೆಲವರು ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಶಾರದಬ್ಬಿ ಜಲಪಾತವನ್ನು ಪ್ರವಾಸಿಗರು ವೀಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಚಿಂತನೆ ನಡೆಸಿದ್ದೇನೆ. ಆದರೆ ಅರಣ್ಯ ಇಲಾಖೆಯವರು ಇಲ್ಲಿನ ಪ್ರವಾಸೋಧ್ಯಮದ ಅಭಿವೃದ್ದಿಗೆ ಪೂರಕವಾದ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ. ಹಲವೆಡೆ ರಸ್ತೆ ಕಾಮಗಾರಿಗಳು ಕೈಗೊಂಡ ಸಂದರ್ಭದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿಮಾಡಿಕೊಂಡ

ಕೆಲವರು ಕೆಲಸಕ್ಕೆ ತೊಂದರೆ ನೀಡುತ್ತಿದ್ದಾರೆ. ಅನೇಕ ಸಮಸ್ಯೆಗಳ ನಡುವೆ ಅಭಿವೃದ್ದಿ ಕಾರ್ಯಗಳನ್ನು ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಕ್ಷೇತ್ರದಲ್ಲಿದೆ. ನಾಗರಿಕರ ಸಹಕಾರವಿದ್ದಲ್ಲಿ ಮಾತ್ರ ಅಭಿವೃದ್ದಿ ಕಾರ್ಯಗಳನ್ನು ಜನರ ನಿರೀಕ್ಷೆಗೆ ತಕ್ಕಂತೆ ಮಾಡಬಹುದು ಎಂದು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು.

ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ನಿರಂತರ ವಾಹನ ದಟ್ಟಣೆ ಎದುರಾಗುತ್ತಿದೆ. ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಅಡ್ಡಾದಿಡ್ಡಿ ಓಡಾಟ, ನಿಲುಗಡೆ ಬಗ್ಗೆ ನಾಗರಿಕರು ದೂರು ನೀಡಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಗೋಣಿಕೊಪ್ಪ ನೂತನ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದ ನಂತರ ಬಸ್ ನಿಲ್ದಾಣದ ಟ್ರಾಫಿಕ್ ಸಮಸ್ಯೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳೋಣ ಅಲ್ಲಿಯ ತನಕ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಕೆಲವೇ ದಿನಗಳಲ್ಲಿ ಹಿರಿಯ ಅಧಿಕಾರಿಗಳೊಂದಿಗೆ, ಸಂಘ ಸಂಸ್ಥೆಯ ಪ್ರಮುಖರೊಂದಿಗೆ ವಿಶೇಷ ಸಭೆ ನಡೆಸುವ ಮೂಲಕ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳೋಣ, ಗೋಣಿಕೊಪ್ಪ ನಗರದ ಅಭಿವೃದ್ಧಿಗೆ ನಾಗರಿಕರ ಸಹಕಾರ ಸದಾ ಇರಲಿ ಎಂದು ಆಶಿಸಿದರು.

ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ಸಂಸ್ಥೆ ಸ್ಥಾನೀಯ ಸಮಿತಿ ಗೋಣಿಕೊಪ್ಪ ಹಾಗೂ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸನ್ಮಾನ ಗೌರವ ಸ್ವೀಕರಿಸಿದ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕ್ರೀಡೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಕ್ರೀಡಾಪ್ರಾಧಿಕಾರದ ಜವಾಬ್ದಾರಿಯನ್ನು ನೀಡಲು ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣನವರ ಕೊಡುಗೆ ಅಪಾರವಾಗಿದೆ. ರಾಜ್ಯದ ಪ್ರತಿ ಜಿಲ್ಲೆಗಳಿಗೆ ಪ್ರವಾಸ ತೆರಳುವ ಮೂಲಕ ಕ್ರೀಡೆಯ ಬೆಳವಣಿಗೆಗೆ ಬೇಕಾದ ಪೂರಕ ವರದಿಗಳನ್ನು ಪಡೆಯಲಾಗುತ್ತಿದೆ ಎಂದರು.

ಮರ್ಚೆAಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯನವರು ಕ್ರೀಡೆಯ ಬೆಳವಣಿಗೆಗೆ ತಮ್ಮ ಅವಧಿಯಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವಂತಾಗಲಿ, ಶಾಸಕ ಎ.ಎಸ್.ಪೊನ್ನಣ್ಣನವರು ಉತ್ತಮ ವ್ಯಕ್ತಿಗೆ ಕ್ರೀಡಾ ಪ್ರಾಧಿಕಾರದ ಜವಾಬ್ದಾರಿಯನ್ನು ಹಂಚಿಕೆ ಮಾಡಿರುವುದು ಗಮನಾರ್ಹವಾಗಿದೆ. ಮುಂದೆ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಸಾಕಷ್ಟು ಉತ್ತೇಜನ ಸಿಗುವಂತಾಗಲಿ ಎಂದರು.

ಚೇAಬರ್ ಆಫ್ ಕಾಮರ್ಸ್ನ ಪದಾಧಿಕಾರಿ ಪೊನ್ನಿಮಾಡ ಸುರೇಶ್ ಮಾತನಾಡಿ, ಗೋಣಿಕೊಪ್ಪ ನಗರದ ಅಭಿವೃದ್ದಿಗೆ ಪೂರಕವಾದ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಸಹಕಾರ ನೀಡುತ್ತಿರುವುದು ಶ್ಲಾಘನೀಯ, ದಕ್ಷಿಣ ಕೊಡಗಿನಲ್ಲಿ ಪ್ರವಾಸೋಧ್ಯಮಕ್ಕೆ ಪೂರಕವಾದ ವಾತಾವರಣವಿದೆ. ಆ ನಿಟ್ಟಿನಲ್ಲಿ ವಿಶೇಷ ಯೋಜನೆಗಳು ಜಾರಿಯಾಗಬೇಕು.ಇದರಿಂದ ನಗರದ ಅಭಿವೃದ್ದಿಗೆ ಪೂರಕವಾಗಲಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ಸಂಸ್ಥೆ ಸ್ಥಾನೀಯ ಸಮಿತಿ ಗೋಣಿಕೊಪ್ಪದ ಅಧ್ಯಕ್ಷರಾದ ಕಡೆಮಾಡ ಸುನಿಲ್ ಮಾದಪ್ಪ ಮಾತನಾಡಿ, ನಗರದ ಅಭಿವೃದ್ಧಿಗೆ ಪೂರಕವಾಗಿ ಹತ್ತಾರು ಸಭೆಗಳನ್ನು ಚೇಂಬರ್ ವತಿಯಿಂದ ನಡೆಸುತ್ತಲೇ ಬಂದಿದ್ದೇವೆ. ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಕ್ಷೇತ್ರದ ಶಾಸಕರು ಯೋಜನೆ ಸಿದ್ಧಪಡಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ಸಂಸ್ಥೆ ಸ್ಥಾನೀಯ ಸಮಿತಿಯ ಹಿರಿಯರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ,ಎಫ್‌ಕೆಸಿಸಿನ ಕಾಡ್ಯಮಾಡ ಗಿರೀಶ್ ಗಣಪತಿ, ಅರುಣ್ ಮಾಚಯ್ಯನವರ ಪತ್ನಿ ಚಾಂದಿನಿಮಾಚಯ್ಯ, ಗ್ರಾಮಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ಸಂಸ್ಥೆ ಸ್ಥಾನೀಯ ಸಮಿತಿ ಗೋಣಿಕೊಪ್ಪ ಹಾಗೂ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪದಾಧಿಕಾರಿಗಳಾದ ಎಂ.ಪಿ.ಕೇಶವ್ ಕಾಮತ್, ಪಿ.ಜಿ.ರಾಜಶೇಖರ್,ಎ.ಜೆ.ಬಾಬು, ಕಳ್ಳಿಚಂಡ ನೋಬನ್ ಮಂದಪ್ಪ,ಸಿಇಒ ಕಾರ್ತಿಕ್,ಲಕ್ಷಿö್ಮ ರೆಡ್ಡಿ,ನಾಮೇರ ದೇವಯ್ಯ,ಮಲ್ಚಿರ ಗಾಂಧಿ ದೇವಯ್ಯ,ಅಹಮ್ಮದ್, ನಾಸಿರ್, ಉಮ್ಮರ್, ಎಂ.ಜಿ.ನಾಗೇಶ್, ಗಣೇಶ್ ರೈ, ಸೇರಿದಂತೆ ಅನೇಕ ಪ್ರಮಖರು ಉಪಸ್ಥಿತರಿದ್ದರು.

ಪದಾಧಿಕಾರಿಗಳಾದ ಬಿ.ಎನ್.ಪ್ರಕಾಶ್,ಕಾರ್ಯಕ್ರಮ ನಿರೂಪಿಸಿ, ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಅರುಣ್‌ಪೂಣಚ್ಚ ಸ್ವಾಗತಿಸಿ ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು.