ಕುಶಾಲನಗರ, ನ. ೧೫: ಕಾವೇರಿ ನದಿ ಬಫರ್ ಜೋನ್ ಒತ್ತುವರಿ ಮಾಡಿ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಕುಶಾಲನಗರ ಪುರಸಭೆಗೆ ದೂರು ನೀಡಲಾಗಿದೆ. ತಕ್ಷಣ ಅಕ್ರಮ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕ್ರಮ ಕೈಗೊಳ್ಳುವಂತೆ ಕಾವೇರಿ ನದಿ ಸಂರಕ್ಷಣಾ ಸಮಿತಿಯ ಪ್ರಮುಖರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಕುಶಾಲನಗರ ಮಡಿಕೇರಿ ರಸ್ತೆಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಎದುರು ಭಾಗದಲ್ಲಿ ಭಾರಿ ಪ್ರಮಾಣದ ಮಣ್ಣು ತುಂಬಿಸಿ ನದಿ ತಟವನ್ನು ಒತ್ತುವರಿ ಮಾಡಿ ತಡೆಗೋಡೆ ನಿರ್ಮಾಣ ಕಾಮಗಾರಿ ಬಗ್ಗೆ ನದಿ ಸಂರಕ್ಷಣಾ ಸಮಿತಿಯ ಚಂದ್ರಮೋಹನ್ ಮತ್ತು ಪ್ರಜ್ವಲ್ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾದಾಪಟ್ಟಣ ಗ್ರಾಮ ಬಳಿ ಕಾವೇರಿ ನದಿ ತಟದಲ್ಲಿರುವ ಕುಶಾಲನಗರ ಪುರಸಭೆಗೆ ಒಳಪಟ್ಟಿರುವ ಕುಡಿಯುವ ನೀರಿನ ಪಂಪ್ ಹೌಸ್ ಕಟ್ಟಡವನ್ನು ಒತ್ತುವರಿ ಮಾಡಿ ತಡೆಗೋಡೆ ಕಾಮಗಾರಿ ನಡೆಯುತ್ತಿರುವ ದೃಶ್ಯ ಕಂಡು ಬಂದಿದೆ. ಕುಶಾಲನಗರ ಮಡಿಕೇರಿ ಹೆದ್ದಾರಿಯ ಮೇಲ್ಭಾಗದ ವಾಣಿಜ್ಯ ಕಟ್ಟಡಗಳಿಂದ ಹೊರಬರುವ ಕಲುಷಿತ ನೀರನ್ನು ಅಕ್ರಮವಾಗಿ ಪೈಪ್ ಅಳವಡಿಸಿ ನದಿಗೆ ನೇರವಾಗಿ ಬಿಡುತ್ತಿರುವ ದೃಶ್ಯ ಗೋಚರಿಸಿದ್ದು, ತಕ್ಷಣ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಜೆ. ಗಿರೀಶ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.