ಸೋಮವಾರಪೇಟೆ, ನ. ೧೫: ಹಿಂದೂ ಮಲಯಾಳಿ ಸಮಾಜದ ತಾಲೂಕು ಘಟಕದ ವತಿಯಿಂದ ತಾ. ೧೬ರಂದು (ಇಂದು) ಪಟ್ಟಣದಲ್ಲಿ ಸಂಭ್ರಮದ ಓಣಂ ಉತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಹಾಗೂ ತಾಲೂಕು ಸಮಿತಿ ಅಧ್ಯಕ್ಷ ವಿ.ಎಂ. ವಿಜಯ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮಲಯಾಳಿ ಸಮಾಜದಿಂದ ಪ್ರಮುಖ ಉತ್ಸವವಾದ ಓಣಂ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಹಿನ್ನೆಲೆ ಪ್ರಸಕ್ತ ವರ್ಷ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ತಾ. ೧೬ರಂದು ಬೆಳಿಗ್ಗೆ ೭ರಿಂದ ೮ ಗಂಟೆಯವರೆಗೆ ಸಭಾಂಗಣದಲ್ಲಿ ಪೂಕಳಂ ಸ್ಪರ್ಧೆ ನಡೆಯಲಿದ್ದು, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮಾಧವನ್ ಉದ್ಘಾಟಿಸಲಿದ್ದಾರೆ ಎಂದರು.
೯ ಗಂಟೆಗೆ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಿಂದ ಸಭಾಂಗಣದವರೆಗೆ ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ಓಣಾಘೋಷ ಯಾತ್ರೆ ನಡೆಯಲಿದೆ. ೧೦.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನ ಮಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೇರಳದ ಕಾಞಂಗಾಡ್ ಗೃಹಸ್ಥಾಶ್ರಮ ಮಠದ ಶ್ರೀ ಗಂಗಾಜೀ ನಾಯರ್ ಸಾನ್ನಿಧ್ಯ ವಹಿಸಿದ್ದಾರೆ. ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಉಸ್ತುವಾರಿ ಸಚಿವ ಭೋಸರಾಜು, ಶಾಸಕರಾದ ಮಂತರ್ ಗೌಡ, ಎ.ಎಸ್. ಪೊನ್ನಣ್ಣ, ಸಂಸದ ಯಧುವೀರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜೀ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜೀವಿಜಯ, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸಮಾಜದ ಗೌರವಾಧ್ಯಕ್ಷ ಕೆ.ಎಸ್. ರಮೇಶ್, ಉಪಾಧ್ಯಕ್ಷ ಸುಧೀರ್, ವಾಸುದೇವ್, ಎಂ.ಕೆ. ಮೋಹನ್, ಪಿ.ಡಿ. ಪ್ರಕಾಶ್, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ ೨ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ನೆರವೇರಲಿದೆ ಎಂದು ವಿ.ಎಂ. ವಿಜಯ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಹಿಂದೂ ಮಲಯಾಳಿ ಸಮಾಜದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ. ಮೋಹನ್, ಉಪಾಧ್ಯಕ್ಷ ಎಸ್. ಅಯ್ಯಪ್ಪ, ಕೆ.ಬಿ. ಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮಾಧವನ್, ಸಹ ಕಾರ್ಯದರ್ಶಿ ಗೀತಾ ಮೋಹನ್, ಸುಚಿತ್ರ ಅವರುಗಳು ಇದ್ದರು.