ಸೋಮವಾರಪೇಟೆ, ನ. ೧೫: ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಚಂದ್ರೋದಯ ಯುವಕ ಸಂಘ, ಸ್ವ ಸಹಾಯ ಸಂಘಗಳು ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಹಾನಗಲ್ಲು ಶೆಟ್ಟಳ್ಳಿ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆಯಿತು.

ಇದರೊಂದಿಗೆ ೩೪ನೇ ವರ್ಷದ ಗ್ರಾಮೀಣ ಕ್ರೀಡಾಕೂಟವನ್ನೂ ಆಯೋಜಿಸಲಾಗಿತ್ತು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳು ಪ್ರಶಸ್ತಿಗೆ ಸೆಣಸಿದರೆ, ಗ್ರಾಮೀಣ ಕ್ರೀಡಾಕೂಟದಲ್ಲಿ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿ ಕ್ರೀಡಾಸ್ಪೂರ್ತಿ ಮೆರೆದರು.

ಕ್ರೀಡಾಕೂಟವನ್ನು ಚಂದ್ರೋದಯ ಯುವಕ ಸಂಘದ ಅಧ್ಯಕ್ಷ ಡಿ.ಜೆ. ಸಚಿನ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶಾಂತ್‌ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯ ವೃದ್ದಿಯೊಂದಿಗೆ ಸಾಮರಸ್ಯಕ್ಕೂ ವೇದಿಕೆಯಾಗಿದೆ ಎಂದರು.

ಇAದು ಹಲವಷ್ಟು ಗ್ರಾಮೀಣ ಹಾಗೂ ಜನಪದೀಯ ಕ್ರೀಡೆಗಳು ತೆರೆಮರೆಗೆ ಸರಿಯುತ್ತಿದ್ದು, ಇವುಗಳ ಉಳಿವಿಗೆ ವಿಶೇಷ ಪ್ರಯತ್ನ ಆಗಬೇಕಿದೆ. ಯುವ ಜನಾಂಗ ಪಾಶ್ಚಿಮಾತ್ಯ ಕ್ರೀಡೆಗಳತ್ತ ಹೆಚ್ಚು ವ್ಯಾಮೋಹಗೊಳ್ಳದೇ, ನೆಲದ ಕ್ರೀಡೆಗಳ ಬಗ್ಗೆಯೂ ಆಸಕ್ತಿ ವಹಿಸಬೇಕು. ಶಾಲೆಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಿ, ಮಕ್ಕಳಿಗೆ ಪ್ರೋತ್ಸಾಹ ತುಂಬಬೇಕು ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯ ಡಿ.ಎಸ್. ಸುರೇಶ್ ರಘು, ವಿಎಸ್‌ಎಸ್‌ಎನ್ ಸದಸ್ಯ ಭಾನುಪ್ರಕಾಶ್, ಮುಖ್ಯಶಿಕ್ಷಕ ಬಿ.ಎಂ. ಸತೀಶ್, ಗ್ರಾಮ ಸಮಿತಿ ಅಧ್ಯಕ್ಷ ಉಲ್ಲಾಸ್, ಉಪಾಧ್ಯಕ್ಷ ಎಲ್.ಎಂ. ಪ್ರಸನ್ನ ಭಾಗಿಯಾಗಿದ್ದರು.

ನಂತರ ಜಿಲ್ಲಾ ಮಟ್ಟದಲ್ಲಿ ಮಹಿಳೆಯರ ಥ್ರೋಬಾಲ್, ಪುರುಷರ ವಾಲಿಬಾಲ್ ಪಂದ್ಯಾಟಗಳು ನಡೆದವು. ಇದರೊಂದಿಗೆ ೩೪ನೇ ವರ್ಷದ ಗ್ರಾಮೀಣ ಕ್ರೀಡಾಕೂಟದ ಭಾಗವಾಗಿ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ, ಪುರುಷರ ವಿಭಾಗದಲ್ಲಿ ಕಬಡ್ಡಿ, ಹಗ್ಗಜಗ್ಗಾಟ, ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಹಗ್ಗಜಗ್ಗಾಟ, ವಿಷದ ಚೆಂಡು, ೫೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಡಿಕೆ ಒಡೆಯುವ ಸ್ಪರ್ಧೆ, ದಂಪತಿ ಓಟ ಸ್ಪರ್ಧೆಗಳು ನಡೆದವು.

ಗ್ರಾಮದ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕ್ರೀಡಾಕೂಟದಲ್ಲಿ, ರೈತಾಪಿ ವರ್ಗದವರೇ ಹೆಚ್ಚಾಗಿರುವ ಹಾನಗಲ್ಲು ಶೆಟ್ಟಳ್ಳಿ ಗ್ರಾಮಸ್ಥರು ಸಂಭ್ರಮದಿAದ ಭಾಗಿಯಾಗಿದ್ದರು. ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಗ್ರಾಮೀಣ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.

ಸAಘದ ಉಪಾಧ್ಯಕ್ಷ ದಿಲೀಪ್, ಪದಾಧಿಕಾರಿಗಳಾದ ಶೋಭರಾಜ್, ಡಿ.ಎಂ. ಜೋಯಪ್ಪ, ಸ್ವಾಗತ್ ಸೇರಿದಂತೆ ಇತರರು ಕ್ರೀಡಾಕೂಟ ನಿರ್ವಹಿಸಿದರು.