ವೀರಾಜಪೇಟೆ, ನ. ೨೫: ಸಮುದಾಯ ಬಾಂಧವರನ್ನು ಒಂದುಗೂಡಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಿಷ್ಟಗೊಳಿಸುವಂತೆ ಬಂಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ರೈ ಅವರು ಕರೆ ನೀಡಿದರು.

ಪಟ್ಟಣದ ಹಿಲ್ ಪ್ಯಾಲೆಸ್ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಉದ್ದೇಶಿತ ಬಂಟರ ಭವನದ ಭೂಮಿಪೂಜೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಮುದಾಯದವರು ಒಗ್ಗಟ್ಟಿನಿಂದ ಮುಂದುವರೆದರೆ ಸರ್ಕಾರದಿಂದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಸಂಘಟನೆಯಲ್ಲಿ ಮುಂದೆಯು ಕೂಡ ಯಾವುದೇ ಒಡಕಿಗೆ ಅವಕಾಶ ನೀಡದೆ ಮುನ್ನಡೆಯಬೇಕು. ಜೊತೆಯಾಗಿ ಮುನ್ನಡೆದರೆ ಎಲ್ಲರ ಪ್ರಗತಿ ಸಾಧ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.

ಮಡಿಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಆಧುನಿಕ ಮಾದರಿಯ ಬಂಟರ ಭವನ ಕಾಮಗಾರಿಯ ಭೂಮಿಪೂಜೆಯನ್ನು ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಕೈಗೊಳ್ಳಲಾಗುತ್ತದೆ. ಭೂಮಿಪೂಜೆಯ ದಿನಾಂಕವನ್ನು ಸದÀ್ಯದಲ್ಲೆ ನಿಗದಿಪಡಿಸಲಾಗುವುದು. ಸಮುದಾಯದ ಪ್ರತಿಯೊಬ್ಬರೂ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಈ ಯೋಜನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘದ ತಾಲೂಕು ಘಟಕದ ಅಧ್ಯಕ್ಷ ನೀಲಿಮಾಡು ಲೀಲಾಧರ ರೈ ಮಾತನಾಡಿ ದಕ್ಷಿಣ ಕೊಡಗಿನ ಭಾಗದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಸಮುದಾಯದ ಏಳಿಗೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಜೊತೆಯಾಗಿ ಮುನ್ನಡೆಯೋಣ. ಉದ್ದೇಶಿತ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಲಾಗುವುದು ಎಂದರು.

ಸಭೆಯಲ್ಲಿ ಬಂಟರ ಸಂಘದ ಮಡಿಕೇರಿ ನಗರ ಘಟಕದ ಅಧ್ಯಕ್ಷ ಪ್ರಭು ರೈ, ಬಂಟರ ಭವನ ಟ್ರಸ್ಟ್ನ ಕಾರ್ಯದರ್ಶಿ ಗಿರೀಶ್, ಖಜಾಂಚಿ ಬಾಲಕೃಷ್ಣ ರೈ, ಡಾ. ಹೇಮಂತ್ ಮಾತನಾಡಿದರು. ಜಿಲ್ಲಾ ಸಮಿತಿಯ ಸುರೇಶ್ ರೈ, ಸಂಪತ್ ಶೆಟ್ಟಿ, ಪ್ರದೀಪ್ ರೈ, ರಾಮಣ್ಣ ರೈ, ಬಂಟರ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ನೀತು ಆಳ್ವ, ಬಿ.ಎಸ್. ಕುಸುಮಾ ರೈ, ಶಶಿಕಲಾ ರೈ, ಗಣೇಶ್ ರೈ, ಮತ್ತಿತರರು ಉಪಸ್ಥಿತರಿದ್ದರು.