ಕುಶಾಲನಗರ, ನ. ೨೫: ಸಮಾಜದಲ್ಲಿ ಪ್ರೀತಿ, ವಿಶ್ವಾಸ ಭ್ರಾತೃತ್ವದ ಸಂಬAಧಗಳ ಕೊಂಡಿಗಳು ಕಳಚಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಮಾತ್ ಇ ಹಿಂದ್ ರಾಜ್ಯ ಕಾರ್ಯದರ್ಶಿ ಜ. ಅಕ್ಬರ್ ಅಲಿ ಉಡುಪಿ ಅವರು ಹೇಳಿದರು.
ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸದ್ಭಾವನ ವೇದಿಕೆ ವತಿಯಿಂದ ನಡೆದ ಸರ್ವಧರ್ಮೀಯರ ಸಭೆಯಲ್ಲಿ ಅವರು ಪ್ರವಚನ ನೀಡಿದರು. ಸಂಬAಧಗಳು ವ್ಯತಿರಿಕ್ತವಾಗಬಾರದು, ಇತರರಿಗೆ ಕೇಡು ಬಯಸಬಾರದು, ಇತರರ ಬಗ್ಗೆ ಅರಿಯುವ ಮೊದಲು ತನ್ನ ಬಗ್ಗೆ ಅರಿವು ಮುಖ್ಯ ಎಂದು ಹೇಳಿದರು.
ಧರ್ಮ ಇದ್ದಲ್ಲಿ ಮಾನವೀಯತೆ ಶಾಂತಿ ಸೌಹಾರ್ದತೆ ಅನುಕಂಪ ನೆಲೆಸಲು ಸಾಧ್ಯ ಎಂದ ಅಕ್ಬರ್ ಅಲಿ ಅವರು ಧರ್ಮ ಅನ್ನೋದು ಮಂದಿರ ಮಸೀದಿಗಳಿಗೆ ಸೀಮಿತವಲ್ಲ ಎಂದರು. ಮಾನವನ ಆಂತರಿಕ ಗುಣಲಕ್ಷಣಗಳು ಧರ್ಮವನ್ನು ಎತ್ತಿ ತೋರಿಸುತ್ತದೆ. ಪ್ರತಿಯೊಬ್ಬರೂ ಜಗತ್ತಿಗೆ ಬಂದ ತನ್ನ ಉದ್ದೇಶವನ್ನು ಮರೆತು ಹೋಗುತ್ತಿರುವುದು ಅಪಾಯಕಾರಿ ಅಂಶವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತ್ ಇ ಹಿಂದ್ ಪ್ರಮುಖರಾದ ಜಿ.ಎಚ್. ಮಹಮ್ಮದ್ ಹನೀಫ್ ಸಹಬಾಳ್ವೆಯ ಜೀವನ, ಸೌಹಾರ್ದತೆಯ ವಾತಾವರಣ ಸೃಷ್ಟಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಕುಶಾಲನಗರ ಗೆಳೆಯರ ಬಳಗದ ಅಧ್ಯಕ್ಷರಾದ ವಿ.ಎಸ್. ಆನಂದಕುಮಾರ್, ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ಕೆ.ಎಚ್. ಅಯೂಬ್ ಸಂಚಾಲಕರಾದ ಕೆ.ಎಚ್. ನಿಸಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮುಸ್ತಾಫ, ಕುಶಾಲನಗರ ಗಣಪತಿ ದೇವಾಲಯ ಸಮಿತಿಯ ನಿರ್ದೇಶಕರಾದ ಹೆಚ್ ಎಂ ಚಂದ್ರು ವೇದಿಕೆಯಲ್ಲಿ ಇದ್ದರು. ಇದೇ ಸಂದರ್ಭ ಸಭಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಅಬ್ದುಲ್ಲಾ ಸ್ವಾಗತಿಸಿ ವಂದಿಸಿದರು.