ಶನಿವಾರಸಂತೆ, ನ. ೨೫: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯವನ್ನು ರೂ.೩.೫ ಲಕ್ಷ ವೆಚ್ಚದಲ್ಲಿ ವಿಸ್ತರಿಸಿ, ನವೀಕರಣಗೊಳಿಸಲಾಗಿದ್ದು; ಸುಂದರ ಗ್ರಂಥಾಲಯ ನಿರ್ಮಾಣಕ್ಕೆ ರೂ.೨ ಲಕ್ಷ ಅನುದಾನ ಮಂಜೂರು ಮಾಡಿಸಿದ್ದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ಶಾಸಕರು ಮಾತನಾಡಿ, ಗ್ರಂಥಾಲಯ ತುಂಬ ಸುಂದರವಾಗಿ, ವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ.ಓದುಗರು ಸದಸ್ಯರಾಗುವ ಮೂಲಕ ಗ್ರಂಥಾಲಯ ಸದ್ಬಳಕೆ ಮಾಡಿಕೊಂಡರೆ ಅಭಿವೃದ್ಧಿ ಸಾಧ್ಯ ಎಂದು ಹೇಳಿ, ರಾಜ್ಯ ಪ್ರಶಸ್ತಿ ವಿಜೇತ ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಅವರನ್ನು ಅಭಿನಂದಿಸಿದರು.

ಪAಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಆಯಿಷಾ ಮಾತನಾಡಿ, ಪಂಚಾಯಿತಿ ನಿಧಿ ಹಾಗೂ ಶಾಸಕರ ಅನುದಾನದಿಂದ ಡಿಜಿಟಲ್ ಗ್ರಂಥಾಲಯ ನವೀಕರಣಗೊಂಡಿದೆ. ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಕಾರಣ ಹಾಗೂ ಆನ್‌ಲೈನ್ ಸ್ಪರ್ಧೆಗಳನ್ನು ನಡೆಸುತ್ತಿರುವುದರಿಂದ ಮೇಲ್ವಿಚಾರಕಿ ದಿವ್ಯಾ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ ಎಂದರು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾತನಾಡಿ, ಗ್ರಂಥಾಲಯ ಗ್ರಾಮ ಪಂಚಾಯಿತಿ ವತಿಯಿಂದ ೨೦೦೪ ರಿಂದ ಸ್ಥಾಪನೆಯಾಗಿದೆ.ಪ್ರಸ್ತುತ ೨,೫೨೪ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ೮೨೯ ಸದಸ್ಯರಾಗಿದ್ದು ಸದುಪಯೋಗ ಪಡಿಸಿಕೊಳ್ಳುವುದರ ಜತೆಗೆ ದಿನಪತ್ರಿಕೆಗಳು ನಿತ್ಯವೂ ಬರುತ್ತಿವೆ. ಗ್ರಂಥಾಲಯ ಸಪ್ತಾಹ, ಇತರೆ ಚಟುವಟಿಕೆಗಳು, ವಿಶೇಷ ದಿನಗಳ ಆಚರಣೆ ಹಾಗೂ ವಿದ್ಯಾರ್ಥಿಗಳಿಗೆ ಕೆಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಂಥಾಲಯ ಅರಿವು ಕೇಂದ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ಈ ಸಂದರ್ಭ ಸಾಹಿತಿ ಶ.ಗ. ನಯನತಾರಾ ತಾವು ರಚಿಸಿದ ೫ ಕೃತಿಗಳನ್ನು ಶಾಸಕ ಡಾ. ಮಂತರ್ ಗೌಡ ಅವರ ಮೂಲಕ ಗ್ರಂಥಾಲಯಕ್ಕೆ ಕೊಡುಗೆ ನೀಡಿದರು. ಪಂಚಾಯಿತಿ ಸದಸ್ಯ ಸಿ.ಜೆ.ಗಿರೀಶ್ ಮಾತನಾಡಿದರು.ಅಧ್ಯಕ್ಷೆ ಭವಾನಿ ಗುರುಪ್ರಸನ್ನ, ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಡಿ.ಪಿ.ಬೋಜಪ್ಪ, ಎಂ.ಡಿ.ದೇವರಾಜ್, ಎಸ್.ಪಿ. ಭಾಗ್ಯಾ, ಪೂರ್ಣಿಮಾ ಕಿರಣ್, ಮನುಮಹಾಂತೇಶ್, ನಿತಿನ್, ಸತ್ಯವತಿ, ಜಾನಕಿ, ನಂದಿನಿ, ಕಾಂತರಾಜ್, ಸಿಬ್ಬಂದಿ, ಇಲಾಖಾ ಅಧಿಕಾರಿಗಳು, ಬಿಜೆಪಿ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.

ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮತ್ತು ವಿವಿಧ ಇಲಾಖೆ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ್ದ ಸಂಜೀವಿನಿ ಸಭಾಂಗಣ ಉದ್ಘಾಟಿಸಿದ ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.