ಪೊನ್ನಂಪೇಟೆ, ಡಿ. ೩: ಇತ್ತೀಚೆಗೆ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಅಧ್ಯಯನ ಮಾಡಿದ ೧೯೯೯ನೇ ಸಾಲಿನ ವಿದ್ಯಾರ್ಥಿಗಳು ಗುರುಗಳಿಗೆ ಗುರುವಂದನೆ ಸಲ್ಲಿಸಿದರು.
ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ.ಎಂ. ದೇವಗಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದ ಗುರಿ ಮತ್ತು ಗುರುಗಳ ಮಾರ್ಗದರ್ಶನ ಸಾಧನೆಗೆ ಅಗತ್ಯ ಎಂದರು.
ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ಶಿಕ್ಷಕ ಹಳೆ ವಿದ್ಯಾರ್ಥಿ ಅಬ್ದುಲ್ ಮುನೀರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೊನ್ನಂಪೇಟೆ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಹಾಸ್ಟೆಲ್ ಸ್ಥಾಪನೆ ಮಾಡಿದ್ದರಿಂದ, ವಿದ್ಯಾರ್ಥಿಗಳು ಕೊಡಗಿನ ಮೂಲೆ ಮೂಲೆಗಳಿಂದ ಇಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತೆಂದರು.
ನಿವೃತ್ತ ಶಿಕ್ಷಕಿ ದೇವಕ್ಕಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮೂಲಕ ಸಮಾಜದ ಏಳಿಗೆಗೆ ದುಡಿಯಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶಕೀಲ ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಂಗೀತ ಕುರ್ಚಿ ಆಟ ನಡೆಯಿತು. ಹಳೇ ವಿದ್ಯಾರ್ಥಿಗಳು ಹಾಡು - ಹಾಸ್ಯದ ಮೂಲಕ ರಂಜಿಸಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಹಾಜರಿದ್ದರು.