ನಾಪೋಕ್ಲು, ಡಿ. ೫: ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ/ ಹುತ್ತರಿ ಹಬ್ಬದ ದಿನವಾದ ಗುರುವಾರ ವಾರ್ಷಿಕ ಬಿರ್ಚ್ಯಾರ್ ಕಲಾಡ್ಚ ಹಬ್ಬವನ್ನು ತಕ್ಕ ಮುಖ್ಯಸ್ಥರು, ಊರಿನ ಪರವೂರಿನ ಭಕ್ತರು ಸೇರಿ ಸಾಂಪ್ರದಾಯಿಕವಾಗಿ ಆಚರಿಸುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.

ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟವನ್ನು ಒಪ್ಪಿಸಲಾಯಿತು. ನಂತರ ಹಾಲು ಬಲಿವಾಡು.

ಭಕ್ತಾದಿಗಳಿಂದ ತುಲಾಭಾರ ಸೇವೆ ಸೇರಿದಂತೆ ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಿದ ಬಳಿಕ ಮಹಾಪೂಜೆ ಜರುಗಿ ಭಕ್ತಾದಿಗಳಿಗೆ ತೀರ್ಥ, ಪ್ರಸಾದ, ಅನ್ನಸಂತರ್ಪಣೆ ನೆರವೇರಿತು.

ನಂತರ ದೇವರ ನಡೆಯಲ್ಲಿ ನಿಂತು ತಕ್ಕ ಮುಖ್ಯಸ್ಥರು ನಾಡಿನ ಸುಬೀಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವರ ಪ್ರದರ್ಶನ ಬಲಿ ಜರುಗಿ ಎತ್ತುಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತಾದಿಗಳು ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ತೆರಳಿದರು.

ಇದೇ ಸಂದರ್ಭ ಪೇರೂರು ಹಾಗೂ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಎತ್ತು ಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ಧಕಲಶ ಪೂಜಾಕಾರ್ಯಗಳನ್ನು ನೆರವೇರಿಸಿ ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು. ಬಳಿಕ ಎತ್ತುಪೋರಾಟದ ಅಕ್ಕಿಯನ್ನು ಮೂರು ಭಾಗಮಾಡಿ ನೆಲಜಿ, ಪೇರೂರು ಹಾಗೂ ಪಾಡಿ ದೇವಾಲಯದ ತಕ್ಕಮುಖ್ಯಸ್ಥರು ಹಂಚಿಕ್ಧೆAಡು ದೇವರ ಕಟ್ಟು ಸಡಿಲಿಸಿ ನಾಡಿನ ಸುಬೀಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಲಾಡ್ಚ ಸಂಭ್ರಮದಿದ ಜರುಗಿತು. ಈ ಸಂದರ್ಭ ನಾಡಿನ ಮತ್ತು ದೇವಾಲಯದ ೧೩ ತಕ್ಕ ಮುಖ್ಯಸ್ಥರು, ವ್ಯವಸ್ಥಾಪನಾ ಸಮಿತಿ, ಭಕ್ತಜನ ಸಂಘ ಸೇರಿದಂತೆ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಊರಿನ, ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.

- ದುಗ್ಗಳ ಸದಾನಂದ.