ಕಣಿವೆ, ಡಿ. ೫ : ಹೆಜ್ಜೇನು ಧಾಳಿ ನಡೆಸಿದ ಪರಿಣಾಮ ಮೂವರು ಗಾಯಗೊಂಡು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಕಣಿವೆ ಗ್ರಾಮದಲ್ಲಿ ನಡೆದಿದೆ.
ಸೋಮವಾರಪೇಟೆ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಕಾರ್ತಿಕ್ ಕುಮಾರ್, ಇವರ ತಾಯಿ ಉಷಾ ಹಾಗೂ ಕಾರ್ತಿಕ್ ಚಿಕ್ಕಪ್ಪ ಪ್ರಕಾಶ್ ಗಾಯಗೊಂಡವರು.
ಹುತ್ತರಿ ಅಂಗವಾಗಿ ಕಚೇರಿಗೆ ರಜೆ ಇದ್ದುದರಿಂದ ಕಾರ್ತಿಕ್ ತನ್ನ ತಾಯಿಯೊಂದಿಗೆ ಶುಕ್ರವಾರ ಬೆಳಿಗ್ಗೆ ೧೧ ಗಂಟೆಯ ಸಮಯದಲ್ಲಿ ತೋಟಕ್ಕೆ ತೆರಳಿದ್ದರು.
ಈ ಸಂದರ್ಭ ದಿಢೀರನೇ ಗುಂಪು ಗುಂಪಾಗಿ ಧಾವಿಸಿದ ಹೆಜ್ಜೇನು ಹುಳಗಳು ಮೊದಲು ಕಾರ್ತಿಕ್ ಕುಮಾರ್ ಮೇಲೆ ಆಕ್ರಮಣ ಮಾಡಿದ್ದು, ತಕ್ಷಣವೇ ಕಿರುಚಿಕೊಂಡು ಕಾರಿನತ್ತ ಓಡಿಹೋಗಿ ರಕ್ಷಣೆ ಪಡೆಯಬೇಕು ಎನ್ನುವಷ್ಟರಲ್ಲಿ ಅನತಿ ದೂರದಲ್ಲಿದ್ದ ಇವರ ತಾಯಿ ಉಷಾ ಹಾಗೂ ಚಿಕ್ಕಪ್ಪ ಅವರಿಗೂ ಕಚ್ಚಿದೆ.
ತಕ್ಷಣವೇ ತಾಯಿ ಮತ್ತು ಮಗ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಧಾವಿಸಿ, ವೈದ್ಯ ಡಾ. ಕೀರ್ತಿ ಕುಮಾರ್ ಹೆಜ್ಜೇನು ಕಡಿತದ ಮುಳ್ಳುಗಳನ್ನು ತೆಗೆದು ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಆಸ್ಪತ್ರೆಗೆ ಧಾವಿಸಿದ ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ಸಿಬ್ಬಂದಿ ಕಾರ್ತಿಕ್ ಕುಮಾರ್ ಆರೋಗ್ಯ ವಿಚಾರಿಸಿದರು.
ಪ್ರಕಾಶ್ ಎಂಬವರು ಕುಶಾಲನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.