ನಾಪೋಕ್ಲು, ಡಿ. ೬: ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿ. ಮೇಕೇರಿರ ಕಾರ್ಯಪ್ಪ ಸ್ಮರಣಾರ್ಥ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೋಕ್ಲುವಿನ ಎಕ್ಸೆಲ್ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯ ವಿದ್ಯಾರ್ಥಿಗಳ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿತು.ತೃತೀಯ ಸ್ಥಾನವನ್ನು ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳ ತಂಡ ಪಡೆದುಕೊಂಡರು. ಸಮಾಧಾನ ಕರ ಬಹುಮಾನಗಳನ್ನು ಮೂರ್ನಾಡು ಕೋಡಂಬೂರಿನ ಜ್ಞಾನಜ್ಯೋತಿ ಎಜುಕೇಶನ್ ಸೊಸೈಟಿ ಹಾಗೂ ಚೇರಂಬಾಣೆಯ ರಾಜರಾಜೇಶ್ವರಿ ಶಾಲಾ ತಂಡಗಳು ಪಡೆದುಕೊಂಡವು. ಸ್ಪರ್ಧೆಯಲ್ಲಿ ಒಟ್ಟು ೯ ತಂಡಗಳು ಪಾಲ್ಗೊಂಡಿದ್ದವು ಶಾಲಾ ಸಭಾಂಗಣದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬೇತು ಗ್ರಾಮದ ಎಕ್ಸೆಲ್ ಶಾಲೆಯ ವಿದ್ಯಾರ್ಥಿಗಳಾದ ದರ್ಶ ದೇಚಮ್ಮ, ದುಂಧುಭಿ ಹಾಗೂ ನಿಶಾಂತ್ ವಿದ್ಯಾರ್ಥಿಗಳ ತಂಡ ೧೦೨ ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿತು. ವಿಜೇತ ತಂಡಕ್ಕೆ ೫೦೦೦ ರೂ.ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯ ರಸಜ್ಞ ಮಾದಪ್ಪ,ಮೊಹಮದ್ ಶಾದಿನ್ ಮತ್ತು ಅನರ್ವ ಬೋಪಣ್ಣ ವಿದ್ಯಾರ್ಥಿಗಳ ತಂಡ ೯೫ ಅಂಕ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.ಈ ತಂಡಕ್ಕೆ ರೂ. ೪೦೦೦ ನಗದು ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ವೀರಾಜಪೇಟೆಯ ಕಾವೇರಿ ಶಾಲೆಯ ಶ್ರಿವತ್ಸ, ಸೃಷ್ಠಿ ಮತ್ತು ಮೊಹಮದ್ ಶಿಫಾನ್ ವಿದ್ಯಾರ್ಥಿಗಳ ತಂಡ ೯೦ ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿತು. ಈ ತಂಡಕ್ಕೆ ರೂ. ೨೦೦೦ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆÀ ಪಲ್ಲವಿ ಹೆಚ್.ಸಿ. ಮಾತನಾಡಿ ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಪತ್ತೆ ಹಚ್ಚುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಅರಿವಿನ ಸಾಮರ್ಥ್ಯ ಎಷ್ಟಿರುತ್ತದೆ ಅಷ್ಟು ಜ್ಞಾನ, ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯ. ಇಂದು ಜ್ಞಾನವು ನಮ್ಮ ಬೆರಳುಗಳ ತುದಿಯಲ್ಲಿ ಇದೆ. ಯಾವ ಮಾಹಿತಿ ಯೋಗ್ಯವಾದದ್ದು ಅದನ್ನು ಆರಿಸಿಕೊಂಡು ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಿಕೊಳ್ಳಬೇಕು ಎಂದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಬಿದ್ದಾಟಂಡ ಮುತ್ತಣ್ಣ, ಬೊಳ್ಳಚೆಟ್ಟಿರ ಸುರೇಶ್ ಪಾಲ್ಗೊಂಡಿದ್ದರು. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ೯ ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಸುತ್ತಿಗೆ ಐದು ತಂಡಗಳನ್ನು ಆಯ್ಕೆ ಮಾಡಲಾಯಿತು. ಕ್ವಿಜ್ ಮಾಸ್ಟರ್ ಆಗಿ ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ್ ಹಾಗೂ ಮಡಿಕೇರಿ ಬಿಆರ್‌ಸಿ ಕೇಂದ್ರದ ಕಂಪ್ಯೂಟರ್ ಪ್ರೊಗ್ರಾಮರ್ ಡಿ.ಎಸ್. ಪ್ರಸಾದ್ ಪಾಲ್ಗೊಂಡಿದ್ದರು. ಶಿಕ್ಷಕರಾದ ಕಾಳಯ್ಯ, ಚಂದ್ರಕಲಾ, ಸ್ಮಿತಾ ರಸಪ್ರಶ್ನೆ ಸ್ಪರ್ಧೆಯನ್ನು ನಿರ್ವಹಿಸಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಬಿ.ಎಂ. ಶಾರದಾ ಸ್ವಾಗತಿಸಿದರು. ಶಿಕ್ಷಕಿ ಕೆ.ಎಸ್. ಶೋಭ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಎಂ.ಎಸ್. ಭಾಗೀರಥಿ ವಂದಿಸಿದರು.