ಸೋಮವಾರಪೇಟೆ, ಡಿ.೬ : ಪ್ರವಾಸಿಗರನ್ನು ಸೆಳೆಯುವ ಬೇಳೂರು ಬಾಣೆಯ ಸುತ್ತಲೂ ಬೇಳೂರಿನ ಖಾಸಗಿ ಕ್ಲಬ್ನವರು ಅನಧಿಕೃತವಾಗಿ ಬೇಲಿ ನಿರ್ಮಿಸಿ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಆರೋಪಿಸಿರುವ ಬೇಳೂರು ಬಾಣೆ ರಕ್ಷಣಾ ಹೋರಾಟ ಸಮಿತಿಯ ಪ್ರಮುಖರು, ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಕಾಟ್ನಮನೆ ವಿಠಲ್ ಗೌಡ ಅವರು, ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೆಸರು ಗಳಿಸಿರುವ, ದಿನಂಪ್ರತಿ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ, ವಾಯುವಿಹಾರಿಗಳ ಸಂಚಾರ, ಜಾನುವಾರುಗಳ ಮೇವಿಗೆ ಆಶ್ರಯತಾಣವಾಗಿದ್ದ ಬೇಳೂರು ಬಾಣೆಗೆ ಸ್ಥಳೀಯ ಪ್ರತಿಷ್ಠಿತ ಖಾಸಗಿ ಕ್ಲಬ್ನವರು ಬೇಲಿ ನಿರ್ಮಿಸುವ ಮೂಲಕ ಸರ್ಕಾರಿ ಜಾಗದ ಕಬಳಿಕೆಗೆ ಮುಂದಾಗಿದ್ದಾರೆ ಎಂದು ದೂರಿದರು.
ಕುಸುಬೂರು ಹಾಗೂ ಬೇಳೂರು ಬಸವನಹಳ್ಳಿ ಗ್ರಾಮಗಳಿಗೆ ಒಳಪಡುವ ಸರ್ಕಾರಿ ಪೈಸಾರಿ, ಊರುಡುವೆ, ಕಡಂಗ ಜಾಗ, ಪ್ರವಾಸೋದ್ಯಮ ಇಲಾಖೆಗೆ ಮೀಸಲಿಟ್ಟ ಜಾಗ ಸೇರಿದಂತೆ ಚಿತ್ರದುರ್ಗ ಮುರುಘಾಮಠಕ್ಕೆ ಒಳಪಟ್ಟಿರುವ ಜಾಗವನ್ನೂ ಸೇರಿಸಿ ಕ್ಲಬ್ನವರು ಬೇಲಿ ನಿರ್ಮಿಸಿದ್ದಾರೆ. ಈ ಬಗ್ಗೆ ತಕ್ಷಣ ಕಂದಾಯ, ಪ್ರವಾಸೋದ್ಯಮ ಇಲಾಖೆ ಗಮನ ಹರಿಸಿ ಅನಧಿಕೃತ ಬೇಲಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಸ್ಥಳೀಯ ಕ್ಲಬ್ಗೆ ಸರ್ಕಾರಿ ದಾಖಲೆಗಳ ಪ್ರಕಾರ ೨೯.೫೮ ಏಕರೆ ಜಾಗವಿದೆ. ಆದರೆ ಸುಮಾರು ೫೫ ರಿಂದ ೬೦ ಏಕರೆಗೂ ಅಧಿಕ ಜಾಗಕ್ಕೆ ಸೇರಿಸಿ ಬೇಲಿ ನಿರ್ಮಾಣ ಮಾಡಲಾಗಿದೆ. ಕುಸುಬೂರು ಗ್ರಾಮದ ಸ.ನಂ. ೧೪೩/೨ರಲ್ಲಿ ೭.೧೨ ಏಕರೆ ಜಾಗವನ್ನು ೨೦೧೬ರಲ್ಲಿ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆಗೆ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ಈ ಜಾಗ ಬೇಳೂರು ಬಾಣೆಯ ತುತ್ತತುದಿಯಲ್ಲಿದೆ. ಈ ಜಾಗವನ್ನು ಸೇರಿಸಿ ಕ್ಲಬ್ನವರು ಬೇಲಿ ನಿರ್ಮಿಸಿದ್ದಾರೆ. ಇದರೊಂದಿಗೆ ೭ ಏಕರೆ ಸರ್ಕಾರಿ ಪೈಸಾರಿ ಜಾಗ, ಮುರುಘರಾಜೇಂದ್ರ ಮಠಕ್ಕೆ ಸೇರಿದ ೯ ಏಕರೆ ಜಾಗವನ್ನೂ ಒಳಗೊಂಡAತೆ ಬೇಲಿ ಹಾಕಲಾಗಿದೆ ಎಂದರು. ಇದರೊಂದಿಗೆ ಕುಸುಬೂರು ಗ್ರಾಮದ ಕಡಂಗ, ಊರುಡುವೆಗೆ ಒಳಪಟ್ಟಿರುವ ಜಾಗವನ್ನೂ ಸೇರಿಸಿ ಬೇಲಿ ಹಾಕಲಾಗಿದೆ. ತಕ್ಷಣ ಕಂದಾಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿ, ದಾಖಲೆಗಳನ್ನು ಪರಾಮರ್ಶಿಸಿ ಕ್ರಮ ಕೈಗೊಳ್ಳಬೇಕು. ತಕ್ಷಣ ಗಮನಹರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ, ವಕೀಲ ದೌಲತ್ ಹುಸೇನ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿರುವ ೭ ಏಕರೆ ಜಾಗಕ್ಕೆ ಸಾರ್ವಜನಿಕರು ತೆರಳಲು ಯಾವುದೇ ದಾರಿಯಿಲ್ಲದಂತಾಗಿದೆ. ಕ್ಲಬ್ನವರಿಗೆ ಈ ಜಾಗವನ್ನು ಮಾರಾಟ ಮಾಡಲಾಗಿದೆಯೇ? ಭೋಗ್ಯಕ್ಕೆ ನೀಡಲಾಗಿದೆಯೇ? ಎಂಬ ಬಗ್ಗೆ ಇಲಾಖೆ ಬಹಿರಂಗಪಡಿಸಬೇಕು. ರಾಜಕೀಯ ಪ್ರಭಾವ ಬಳಸಿ ಸರ್ಕಾರಿ ಜಾಗವನ್ನು ಕಬಳಿಸುವ ಯತ್ನ ನಡೆಸಿರುವ ಸಂಶಯವಿದ್ದು, ಇಂತಹ ಕೃತ್ಯದ ವಿರುದ್ಧ ಸಮಿತಿ ಹೋರಾಟ ಸಂಘಟಿಸಲಿದೆ ಎಂದರು.
ಅಧಿಕಾರಿಗಳ ನಿರ್ಲಕ್ಷö್ಯದಿಂದ ಸರ್ಕಾರಿ ಜಾಗ ಖಾಸಗಿಯವರ ಪಾಲಾಗುತ್ತಿದೆ. ಸಣ್ಣಪುಟ್ಟ ಪ್ರಾಣಿಗಳೂ ಸಹ ಬಾಣೆಗೆ ತೆರಳದಂತೆ ಬೇಲಿ ಹಾಕಲಾಗಿದೆ. ತಕ್ಷಣ ಶಾಸಕರು ಸಂಬAಧಿಸಿದ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡಿ, ಬೇಲಿ ತೆರವಿಗೆ ಮುಂದಾಗಬೇಕು. ಕ್ಲಬ್ಗೆ ಸರ್ಕಾರಿ ದಾಖಲೆಗಳ ಪ್ರಕಾರ ಇರುವಷ್ಟು ಜಾಗಕ್ಕೆ ಬೇಲಿ ಹಾಕಿಕೊಳ್ಳಲು ಸಮಿತಿಯ ಆಕ್ಷೇಪಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಕೆ.ಜಿ. ಆನಂದ್, ಕಾರ್ಯದರ್ಶಿ ಸಿ.ಕೆ. ರಾಜೀವ್, ಕಿಶೋರ್ ಗೌಡ ಅವರುಗಳು ಉಪಸ್ಥಿತರಿದ್ದರು.