ಕುಶಾಲನಗರ, ಡಿ. ೬: ಹಣ ಬಲ, ಜಾತಿ ಬಲದ ಬದಲಾಗಿ ವಿದ್ಯಾರ್ಥಿಗಳು ದೈಹಿಕ, ಬೌದ್ದಿಕ ವಿಕಸನದ ಮೂಲಕ ಪ್ರತಿಭಾವಂತರಾಗಿ ತಮ್ಮ ಸ್ವಂತ ಸಾಮರ್ಥ್ಯ ಪ್ರದರ್ಶಿಸಬೇಕಿದೆ ಎಂದು ಚಿಂತಕ, ಅಂಕಣಕಾರ ಹಾಗೂ ವಾಗ್ಮಿಗಳಾದ ಡಾ.ಕೆ.ಪಿ.ಪುತ್ತುರಾಯ ಕರೆ ನೀಡಿದರು.

ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ವಿವೇಕೋತ್ಸವ-೨೦೨೫ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರ ಬೆಳೆಸಿಕೊಂಡು ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಅಭ್ಯಸಿಸುವ ಮೂಲಕ ಜೀವನ ಹಸನಾಗಿಸಿಕೊಳ್ಳಬೇಕಿದೆ.

ವಿದ್ಯಾರ್ಥಿಗಳು ತಮ್ಮ ಮನೆಯ ನಂದಾದೀಪ, ಪೋಷಕರ ಕನಸು, ಶಿಕ್ಷಣ ಸಂಸ್ಥೆಯ ಸೊಬಗು, ದೇಶದ ಆಸ್ತಿ ಎನ್ನುವುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಶೈಕ್ಷಣಿಕ ಅವಧಿಯಲ್ಲಿ ಪೋಷಕರ ತ್ಯಾಗವನ್ನು ಎಂದಿಗೂ ಮರೆಯಬಾರದು. ಪೋಷಕರ ಕನಸುಗಳನ್ನು ಈಡೇರಿಸುವ ಮೂಲಕ ಸಮಾಜದ ಆಸ್ತಿಯಾಗಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ರೀತಿಯ ಆಕರ್ಷಣೆ, ದುಶ್ಚಟ, ದುರಭ್ಯಾಸಗಳಿಗೆ ಬಲಿಯಾಗದಂತೆ ದೇಹ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊAಡು ಉತ್ತಮ ಆರೋಗ್ಯ ಕಾಪಾಡಿಕೊಂಡು, ಶಿಸ್ತು, ಸಂಯಮ, ನಿರಂತರ ಅಧ್ಯಯನ, ಅವಿರತ ಶ್ರಮದಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದರು. ಪೋಷಕರು ಕೂಡ ತಮ್ಮ ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಐಷಾರಾಮಿ ಸೌಲಭ್ಯ ಒದಗಿಸದೆ ಅವರಲ್ಲಿ ಸಂಸ್ಕಾರ ಬಿತ್ತಿ ಬೆಳೆಸಬೇಕಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೇರಕ ಭಾಷಣಕಾರ ಡಾ.ಪಾಂಡುರAಗ ಹೆಚ್.ಆರ್, ಮಾತನಾಡಿ, ಎಲ್ಲಾ ವಿಚಾರಗಳಲ್ಲಿ ಸದುದ್ದೇಶ ಹೊಂದುವುದು ಅಗತ್ಯ. ಎಲ್ಲಾ ಕಾರ್ಯಗಳಿಗೆ ಅದರದ್ದೇ ಆದ ಉದ್ದೇಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಸಾಧ್ಯ. ತಾವು ಪಡೆಯುವ ಶಿಕ್ಷಣ, ಪದವಿ, ಜ್ಞಾನವನ್ನು ಭವಿಷ್ಯದ ಜೀವನದಲ್ಲಿ ಯಾವ ಕಾರ್ಯಕ್ಕೆ ಬಳಸಿಕೊಳ್ಳಬೇಕಿದೆ ಎಂಬ ದೃಢ ಉದ್ದೇಶ ಅಳವಡಿಸಿಕೊಳ್ಳಬೇಕಿದೆ ಎಂದರು.

ವಿವೇಕಾನAದ ಎಜುಕೇಶನಲ್ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿAಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ, ಪೋಷಕರ ಸಹಕಾರ ಅತ್ಯಗತ್ಯ ಎಂದರು.

ವಿವೇಕಾನAದ ಎಜ್ಯುಕೇಶನಲ್ ಟ್ರಸ್ಟ್ ಗೌರವ ಪ್ರಾಂಶುಪಾಲ ಎಂ.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಮಹಾತ್ಮಾಗಾಂಧಿ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ.ಲಿಖಿತಾ, ಟ್ರಸ್ಟ್ ಖಜಾಂಚಿ ನಂಜಪ್ಪ, ಆಡಳಿತಾಧಿಕಾರಿ ಮಹೇಶ್ ಇದ್ದರು. ಅತಿಥಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.