ಸೋಮವಾರಪೇಟೆ, ಡಿ. ೬: ಯಾವುದೇ ವ್ಯಕ್ತಿಯ ಹಕ್ಕುಗಳ ರಕ್ಷಣೆಯಲ್ಲಿ ವಕೀಲರ ಪಾತ್ರ ಹಿರಿದಾಗಿದೆ. ನ್ಯಾಯಾಲಯದ ಪ್ರತಿ ಹೆಜ್ಜೆಯಲ್ಲೂ ವಕೀಲರ ಪಾತ್ರ ಇರುತ್ತದೆ ಎಂದು ಇಲ್ಲಿನ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ.ಎನ್. ಶ್ರೀನಾಥ್ ಹೇಳಿದರು.
ಸೋಮವಾರಪೇಟೆ ನ್ಯಾಯಾಲಯದ ವಕೀಲರ ಸಂಘದ ವತಿಯಿಂದ ಸಭಾಂಗಣದಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ದೇಶಾದ್ಯಂತ ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶಕ್ಕೆ ವಕೀಲರ ಕೊಡುಗೆ ಅಮೋಘ. ದೇಶಕಂಡ ಮಹಾನ್ ನಾಯಕರುಗಳಾದ ಗಾಂಧೀಜಿ, ಅಂಬೇಡ್ಕರ್ ಅವರುಗಳೂ ಸಹ ವಕೀಲರಾಗಿದ್ದರು ಎಂಬುದು ಹೆಮ್ಮೆಯ ವಿಷಯ. ವಕೀಲರಿಗೆ ಸಮಾಜದಲ್ಲಿ ಗೌರವದ ಸ್ಥಾನಮಾನವಿದೆ. ಕಿರಿಯ ವಕೀಲರುಗಳು ಹಿರಿಯ ವಕೀಲರುಗಳಿಂದ ಕಲಿಯುವುದು ಬೇಕಾದಷ್ಟಿವೆ. ದೇಶದಲ್ಲಿ ಕಾಯ್ದೆಗಳು ಬದಲಾಗುತ್ತಿರುತ್ತವೆ. ನಿರಂತರ ಕಲಿಕೆಯಿಂದ ಮಾತ್ರ ಉತ್ತಮ ವಕೀಲರಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಖಾ ಅವರು ಉದ್ಘಾಟಿಸಿ ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮಾಳೇಟಿರ ಬಿ.ಅಭಿಮನ್ಯುಕುಮಾರ್ ಮಾತನಾಡಿ, ಸುಶಿಕ್ಷಿತರಾಗಿರುವ ವಕೀಲರು ಸಮಾಜದ ಸುಧಾರಕರಾಗಿಯೂ ಸೇವೆ ಸಲ್ಲಿಸಬೇಕು. ಇದು ಗೌರವಯುತ ಹುದ್ದೆ. ವೈವಿಧ್ಯತೆಯಲ್ಲಿ ಏಕತೆ ಕಾಪಾಡುವುದು- ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಕೊಡುಗೆ ಅಪಾರ. ಸದೃಢ ಹಾಗೂ ಸರಳ ನ್ಯಾಯ ವ್ಯವಸ್ಥೆ ಭಾರತದಲ್ಲಿದೆ. ನ್ಯಾಯದಾನ ವಿಳಂಬವಾಗದAತೆ ವಕೀಲರು ಗಮನಹರಿಸಬೇಕು ಎಂದರು.
ಸೋಮವಾರಪೇಟೆಯ ವಕೀಲರ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ಸಂಘದಿAದ ಕ್ರಮ ವಹಿಸಲಾಗುತ್ತಿದೆ. ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೂ ಸರ್ಕಾರ ಹಾಗೂ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ.ಈ. ಜಯೇಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರುಗಳಾದ ಹೆಚ್.ಎಸ್. ಪ್ರಕಾಶ್, ಪಿ.ಕೆ. ಗಣಪತಿ ಅವರುಗಳನ್ನು ಸನ್ಮಾನಿಸಲಾಯಿತು.
ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಕೆ.ಎಸ್. ಪದ್ಮಾನಾಭ, ಅರುಣ್, ಹರೀಶ್, ಬಿ.ಜೆ. ದೀಪಕ್, ಯತೀಶ್, ಎನ್.ಸಿ. ಶಿವಕುಮಾರ್, ಜಯೇಂದ್ರ, ಮನೋಹರ್, ಮಹಿಳಾ ವಿಭಾಗದಲ್ಲಿ ವೇದ, ಪ್ರೀತಿ, ಪ್ರಿಯದರ್ಶಿನಿ ಅವರುಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಈ ಹಿಂದೆ ಮಡಿಕೇರಿ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಮಾಳೇಟಿರ ಬಿ. ತಿಮ್ಮಯ್ಯ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ವಕೀಲರ ಸಂಘದ ಕಾರ್ಯದರ್ಶಿ ಯತೀಶ್, ಪದಾಧಿಕಾರಿಗಳಾದ ಕೆ.ಎಸ್. ಪದ್ಮನಾಭ್, ಧರ್ಮಪ್ರಕಾಶ್, ಪ್ರೀತಿ, ಚಂದ್ರಶೇಖರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.