ಸೋಮವಾರಪೇಟೆ, ಡಿ. ೬: ರೈತರ ಜಾಗಕ್ಕೆ ಸಂಬAಧಿಸಿದAತೆ ಉದ್ಭವಿಸಿರುವ ಸಿ. ಮತ್ತು ಡಿ. ಘೋಷಣೆ, ಸೆಕ್ಷನ್ ೪ ಸಮಸ್ಯೆಯ ವಿರುದ್ಧ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತ ಸಂಘ ಹಾಗೂ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ಕಳೆದ ಒಂದೂವರೆ ವರ್ಷದಿಂದ ನಿರಂತರ ಹೋರಾಟ ಮಾಡಿಕೊಂಡು ಬಂದ ಪರಿಣಾಮ ಇದೀಗ ಸರ್ಕಾರ ಸೆಕ್ಷನ್೪ ಹೊರತುಪಡಿಸಿ ಸಿ. ಮತ್ತು ಡಿ. ಜಾಗಕ್ಕೆ ಸಂಬAಧಿಸಿದAತೆ ವರದಿ ನೀಡಲು ಸರ್ಕಾರ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಇದರೊಂದಿಗೆ ಸೆಕ್ಷನ್೪ ಸಮಸ್ಯೆಯತ್ತಲೂ ಸರ್ಕಾರ ಗಮನ ಹರಿಸಬೇಕೆಂದು ರೈತ ಹೋರಾಟ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರು, ಸಮಿತಿಯ ನೇತೃತ್ವದಲ್ಲಿ ತಾಲೂಕು ಬಂದ್, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಲವು ಹೋರಾಟಗಳನ್ನು ರೈತ ಸಂಘದ ಸಹಕಾರದೊಂದಿಗೆ ಮಾಡಿದ್ದೇವೆ. ಎಲ್ಲಾ ಗ್ರಾಮ ಅಭಿವೃದ್ಧಿಗಳ ಸಮಿತಿ, ರೈತರ ಸಹಕಾರದಿಂದ ಇಲ್ಲಿಯವರೆಗೆ ಹೋರಾಟ ಮಾಡಿಕೊಂಡು ಬರಲಾಗಿದೆ. ಈ ಹೋರಾಟ ಇಲ್ಲಿಗೆ ಮುಗಿದಿಲ್ಲ ಎಂದರು.

ಅರಣ್ಯ ಇಲಾಖೆಯು ೧೯೮೧ರಿಂದ ೧೯೯೪ರವರೆಗೆ ರೈತರ ಜಾಗವನ್ನು ಸರ್ವೆ ಮಾಡಿ ವರದಿ ಸಿದ್ಧವಾಗಿಟ್ಟಿದೆ. ಈ ಜಾಗದಲ್ಲಿ ರೈತರು ಮನೆ, ಉಳುಮೆ ಮಾಡಿಕೊಂಡಿದ್ದಾರೆ. ಈವರೆಗೆ ಯಾವುದೇ ನೋಟೀಸ್ ನೀಡಿಲ್ಲ. ಗ್ರಾ.ಪಂ.ಗಳಿಗೂ ತಿಳಿಸಿಲ್ಲ. ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂದಾಗಿ ಸೆಕ್ಷನ್೪ ಸಹ ರೈತರಿಗೆ ಮಗ್ಗುಲಮುಳ್ಳಾಗಿದೆ. ಇದೀಗ ಸರ್ಕಾರವು ಸಮಿತಿ ರಚನೆ ಮಾಡುವ ಸಂದರ್ಭ ಸೆಕ್ಷನ್ ೪ ಹೊರತುಪಡಿಸಿ ಎಂದು ಆದೇಶಿಸಿರುವುದು, ರೈತರ ಸಮಸ್ಯೆಯನ್ನು ಮತ್ತೆ ಜೀವಂತವಿರಿಸಿದAತಾಗಿದೆ ಎಂದರು.

ಸೆಕ್ಷನ್೪ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಇತ್ಯರ್ಥಪಡಿಸಬೇಕು. ತಪ್ಪಿದ್ದಲ್ಲಿ ಕೊಡಗಿನಲ್ಲಿ ರೈತರ ಉಳಿವಿಗಾಗಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದ ಸುರೇಶ್, ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರ ಕಾಫಿ, ಏಲಕ್ಕಿ ತೋಟ ಕಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಈವರೆಗೆ ಅಮಾನತು ಮಾಡಿಲ್ಲ. ಪರಿಹಾರವನ್ನೂ ಒದಗಿಸಿಲ್ಲ. ಈ ಬಗ್ಗೆಯೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸಿ ಮತ್ತು ಡಿ ಹೋರಾಟ ಭಾಗವಾಗಿ ತಾ. ೬ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ದಿನಾಂಕ ನಿಗದಿ ಮಾಡಿದ್ದೆವು. ಇದೀಗ ಸರ್ಕಾರ ಸಮಿತಿ ರಚಿಸಿರುವುದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದ ಅವರು, ಸಮಿತಿಯ ವರದಿ ಬರುವವರೆಗೂ ಅರಣ್ಯ ಇಲಾಖೆಯವರು ರೈತರಿಗೆ ಯಾವುದೇ ನೋಟೀಸ್ ನೀಡಬಾರದು.

ಯಾವುದೇ ಸರ್ವೆ ಕಾರ್ಯಕ್ಕೂ ಮುಂದಾಗಬಾರದು ಎಂದು ಒತ್ತಾಯಿಸಿದರು.

ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಮಾತನಾಡಿ, ಸಿ ಮತ್ತು ಡಿ ಹಾಗೂ ಸೆಕ್ಷನ್೪ ಎಂದರೇನೆAದು ಜನರಿಗೆ ಗೊತ್ತಿರಲಿಲ್ಲ. ಹೀಗಾಗಿ ಒಂದೂವರೆ ವರ್ಷದಿಂದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಒಟ್ಟಿಗೆ ಸೇರಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸಿ ಮತ್ತು ಡಿ ಸಮಸ್ಯೆ ವಿರುದ್ಧದ ಹೋರಾಟಕ್ಕೆ ಇದೀಗ ತಾತ್ಕಾಲಿಕ ಜಯ ಸಿಕ್ಕಿದ್ದರೂ ರೈತರ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಂಡಿಲ್ಲ ಎಂದರು.

ಸಿ ಮತ್ತು ಡಿ ಜಾಗದಲ್ಲಿಯೇ ಸೆಕ್ಷನ್-೪ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ಸರ್ವೆ ನಂಬರ್‌ಗಳು ಸಿ ಮತ್ತು ಡಿ ಇದ್ದುದು ಇದೀಗ ಸೆಕ್ಷನ್೪ ಎಂದಾಗಿದೆ. ಇದು ಅರಣ್ಯ ಇಲಾಖೆಗೆ ಜಾಗವನ್ನು ಹಸ್ತಾಂತರಿಸುವ ಪ್ರಥಮ ಹಂತವಾಗಿದೆ. ಇದರಿಂದಲೂ ರೈತರು ತೀವ್ರ ಸಮಸ್ಯೆಗೆ ಸಿಲುಕಲಿದ್ದಾರೆ. ಸೆಕ್ಷನ್೪ಗೆ ಗುರುತಿಸಿರುವ ಜಾಗದಲ್ಲಿ ರೈತರು ಮನೆ ಕಟ್ಟಿಕೊಂಡು, ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸೆಕ್ಷನ್೪ ನೋಟಿಫಿಕೇಷನ್ ಸ್ಥಗಿತಗೊಳಿಸಿ, ತಕ್ಷಣ ಸಮಿತಿ ರಚಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು. ಸೆಕ್ಷನ್೪ರಿಂದ ಮುಂದುವರೆಸಿ ಫಾರೆಸ್ಟ್ಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಸಮಿತಿ ರಚನೆಗಾಗಿ ಶಾಸಕರು ಹೆಚ್ಚು ಗಮನ ಹರಿಸಿರುವುದು ಶ್ಲಾಘನೀಯ. ಇದರೊಂದಿಗೆ ಸಂಸದರೂ ಸಹ ಸಮಸ್ಯೆಯ ಬಗ್ಗೆ ಕೇಂದ್ರದ ಗಮನ ಸೆಳೆಯುವುದಾಗಿ ಹೇಳಿದ್ದಾರೆ. ಸಮಿತಿಯಲ್ಲಿ ಸ್ಥಳೀಯ ರೈತ ಮುಖಂಡರನ್ನು ಸೇರ್ಪಡೆಗೊಳಿಸಬೇಕು. ಪಕ್ಷಭೇದ ಮರೆತು ರೈತರು ಒಂದಾಗಿ ಹೋರಾಟ ಮಾಡಿದ್ದರಿಂದ ಸಮಿತಿ ರಚನೆಯಾಗಿದೆ. ಸಮಿತಿಯ ವರದಿ ಬರುವವರೆಗೆ ಅರಣ್ಯ ಇಲಾಖೆ ರೈತರ ಜಾಗಕ್ಕೆ ಬರಬಾರದು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ್ ಕೂತಿ, ರೈತ ಸಂಘದ ಮಚ್ಚಂಡ ಅಶೋಕ್, ಹಿರಿಕರ ರಮೇಶ್ ಇದ್ದರು.