ಕಣಿವೆ, ಡಿ. ೭: ಅನ್ನದಾತರು ಬಹಳಷ್ಟು ತ್ರಾಸಪಟ್ಟು ಬೆಳೆಯುವ ಅನ್ನದ ಬೆಳೆ ಭತ್ತದ ಕಟಾವಿನ ಸಂದರ್ಭದಲ್ಲಿ ಹವಾಮಾನ ವ್ಯತಿರಿಕ್ತವಾಗುತ್ತಿರುವುದು ರೈತಾಪಿಗಳಿಗೆ ಇನ್ನಿಲ್ಲದ ಸಂಕಟ ತಂದೊಡ್ಡಿದೆ.
ಅತ್ತ ತೋಟಗಳಲ್ಲಿ ಕಟಾವು ಮಾಡಿದ ಕಾಫಿ ಬೀಜಗಳನ್ನು ಒಣಗಿಸದ ಹಾಗೆ, ಇತ್ತ ಫಸಲು ಬಂದ ಭತ್ತವನ್ನು ಕಟಾವು ಮಾಡಿ ಮನೆಯಂಗಳಕ್ಕೆ ಸಾಗಿಸದಂತೆ ಹವಾಮಾನ ಎಲ್ಲಾ ರೀತಿಯಲ್ಲೂ ಅವಮಾನ ಮಾಡುತ್ತಿರುವ ಬಗ್ಗೆ ಅನ್ನದಾತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ತಾಲೂಕಿನ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದ ಭತ್ತ ಕಟಾವು ನಡೆಯುತ್ತಿದ್ದು ತುಂತುರು ಮಳೆ ಹಾಗೂ ಕಾರ್ಮೋಡದಿಂದಾಗಿ ಕೈಗೆ ಬಂದ ಧಾನ್ಯಲಕ್ಷಿö್ಮ ಭತ್ತ ಮನೆಯೊಳಗಿನ ಕಣಜಕ್ಕೆ ಸಂಗ್ರಹಿಸಿಡಲು ಸಂಕಟ ತಂದೊಡ್ಡಿದೆ.
ಹವಾಮಾನ ಇಲಾಖೆಯ ವರದಿಯಂತೆ ಏನಾದರೂ ಮಳೆ ಸುರಿದು ಬಿಟ್ಟರೆ ಗದ್ದೆಗಳಲ್ಲಿ ಬೆಳೆದು ನಿಂತಿರುವ ಭತ್ತದ ರಾಶಿ ನೆಲ ಕಚ್ಚುವ ಭೀತಿ ಕೃಷಿಕರಲ್ಲಿ ಮನೆ ಮಾಡಿದೆ.
ಹಾಗಾಗಿ ಪುತ್ತರಿ ಪೂಜೆಯ ಸಂದರ್ಭ ಧಾನ್ಯ ಲಕ್ಷಿö್ಮ ಭತ್ತದ ಫಸಲು ಮನೆಗೆ ಸೇರುವ ಸಂದರ್ಭದಲ್ಲಿ ಯಾವುದೇ ವಿಘ್ನಗಳಾಗದ ಹಾಗೆ ಕಾಪಾಡು ದೇವ ಎಂದು ಸಾಮೂಹಿಕವಾಗಿ ಪ್ರಾರ್ಥಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅದಾಗ್ಯೂ ಮುನ್ನೆಚ್ಚರಿಕೆಯಿಂದ ಗದ್ದೆಗಳ ಸುತ್ತಲೂ ಕಾಲುವೆ ಮಾಡಿ ಮಳೆಯ ನೀರು ಹರಿಯುವ ತಾತ್ಕಾಲಿಕ ವ್ಯವಸ್ಥೆಗೆ ರೈತಾಪಿಗಳು ಮುಂದಾಗಿದ್ದಾರೆ.
ಅಕಾಲಿಕ ಮಳೆಯಿಂದಾಗಿ ನೆಲ ಕಚ್ಚಿದ ಭತ್ತದ ಬೆಳೆ
ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಯಲ್ಲಿ ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಿದ ಭತ್ತದ ಬೆಳೆಯು ಗದ್ದೆಗಳಲ್ಲಿ ನೆಲ ಕಚ್ಚಿದೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದ ಅನೇಕ ಗ್ರಾಮಗಳಲ್ಲಿ ಈಗಾಗಲೇ ಭತ್ತದ ಬೆಳೆಯನ್ನು ಕಟಾವು ಮಾಡಲಾಗಿದ್ದು, ಗದ್ದೆಗಳಲ್ಲಿ ಉಳಿದಿವೆ. ಕಳೆದ ಎರಡು ದಿನಗಳಿಂದ ಹೆಚ್ಚು ಮಳೆಯ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ಗದ್ದೆಗಳಿಂದ ಕಟಾವು ಮಾಡಿದ ಬೆಳೆಯು ಕಣದತ್ತ ತರಲು ಸಾಧ್ಯವಾಗುತ್ತಿಲ್ಲ, ಗದ್ದೆಗಳಲ್ಲಿ ಭತ್ತದ ಬೆಳೆಯ ಕಾಳುಗಳು ಉದುರಲಾರಂಭಿಸಿವೆ.
ಕೆಲವು ಪ್ರದೇಶಗಳಲ್ಲಿ ಅಕಾಲಿಕ ಮಳೆಯಿಂದಾಗಿ ಗದ್ದೆಗಳಲ್ಲಿ ಕಟಾವು ಹಂತದ ಬೆಳೆಯು ಕೊಯ್ಲು ಮಾಡುವ ಮೊದಲೇ ನೆಲದಲ್ಲಿ ಹಾಸಿದ ರೀತಿಯಲ್ಲಿ ಮಲಗಿಕೊಂಡಿದೆ.
ಮೋಡ ಕವಿದ ವಾತಾವರಣದ ಜೊತೆಯಲ್ಲಿ ಅನೇಕ ಭಾಗದಲ್ಲಿ ರಾತ್ರಿ ಸಂದರ್ಭದಲ್ಲಿ ತುಂತುರು ಮಳೆ ಬೀಳುತ್ತಿರುವುದರಿಂದಾಗಿ ಕಟಾವು ಮಾಡಿದ ಭತ್ತದ ಬೆಳೆಗೆ ತೊಂದರೆ ಉಂಟಾಗಿ ಭಾರೀ ನಷ್ಟ ಅನುಭವಿಸುವಂತಹ ಪ್ರಸಂಗ ಎದುರಾಗಿದೆ ಎಂದು ಅಚ್ಚುಕಟ್ಟು ಪ್ರದೇಶ ರೈತರಾದ ಭುವನಗಿರಿಯ ಗಿರೀಶ್ ಕಾಳಯ್ಯ, ಮದಲಾಪುರದ ಚಂದ್ರು, ಹುದುಗೂರಿನ ರವಿ, ಮಹೇಶ್, ರಾಯಣ್ಣ, ಕುಮಾರ್, ಜಾನಮ್ಮ, ಸೇರಿದಂತೆ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವಾರದಲ್ಲಿದ್ದ ಬಿಸಿಲಿನ ವಾತಾವರಣವು ಬದಲಾಗಿ ಮಳೆಯು ಬೀಳುತ್ತಿರುವ ಕಾರಣದಿಂದಾಗಿ ಬೆಳೆಯನ್ನು ಗದ್ದೆಗಳಿಂದ ತೆಗೆಯಲು ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಭತ್ತವು ಗದ್ದೆಗಳಲ್ಲಿ ಉದುರುತ್ತಿವೆ, ಜೊತೆಯಲ್ಲಿ ಹೈನುಗಾರಿಕೆಗೆ ಪ್ರಮುಖ ಆಹಾರವಾದ ಭತ್ತದ ಹುಲ್ಲು ಸಹ ಕಪ್ಪಾಗಿ ಹಾಳಾಗುವಂತ ಹಂತಕ್ಕೆ ತಲುಪಿದೆ ಎಂದು ಅಚ್ಚುಕಟ್ಟು ಪ್ರದೇಶ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸAಬAಧಿಸಿದ ಕೃಷಿ ಇಲಾಖೆಯ ಅಧಿಕಾರಿ ವರ್ಗದವರು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ರೈತರು ಆಗ್ರಹಿಸಿದ್ದಾರೆ.
- ಕೆ.ಎಸ್. ಮೂರ್ತಿ, ಕೆ.ಕೆ. ನಾಗರಾಜಶೆಟ್ಟಿ.