ಮಡಿಕೇರಿ, ಡಿ. ೭: ಇತಿಹಾಸ ಪ್ರಸಿದ್ಧ ಕಡಗದಾಳು ಗ್ರಾಮದ ಕುರುಳಿ ಅಂಬಲ ಮಂದ್‌ನಲ್ಲಿ ಪುತ್ತರಿ ಕೋಲ್ ಮಂದ್ ತಾ. ೯ ರಂದು ನಡೆಯಲಿದೆ. ಪುತ್ತರಿ ಕೋಲ್ ಉತ್ಸವದ ಕೊನೆಯ ಕೋಲ್ ಎಂದೇ ಹೆಸರಾಗಿರುವ ಹಾಗೂ ಇಲ್ಲಿ ಕೋಲ್ ಹೊಡೆದು ಇಟ್ಟ ನಂತರದಲ್ಲಿ ಕೊಡಗಿನ ಮತ್ತೆಲ್ಲೂ ಕೋಲಿನ ಸದ್ದು ಕೇಳಬಾರದು ಎಂಬ ಐತಿಹ್ಯವಿರುವ ಈ ಮಂದ್‌ನಲ್ಲಿ ಕಡಗದಾಳು, ಕಗ್ಗೋಡ್ಲು, ಬಿಳಿಗೇರಿ, ಮರಗೋಡು, ಚೆಟ್ಟಳ್ಳಿ, ಈರಳೆವಳಮುಡಿ, ಇಬ್ನಿವಳವಾಡಿ, ಕೊಡಗರಹಳ್ಳಿ ಸೇರಿದಂತೆ ೭ ನಾಡುಗಳು ಸೇರಿ ಕೋಲಾಟ ನಡೆಸುತ್ತಾರೆ. ಗಾಳಿಬೀಡು ಪಾಂಡಿರ ಕುಟುಂಬಸ್ಥರು ದೇಶ ತಕ್ಕರಾಗಿದ್ದು, ಕೊರವಂಡ ಕುಟುಂಬಸ್ಥರು ಮಂದ್ ತಕ್ಕರಾಗಿ ಪುತ್ತರಿ ಕೋಲ್ ಸಂಪ್ರದಾಯವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ತಾ. ೯ ರಂದು ಮಧ್ಯಾಹ್ನ ೨ ಗಂಟೆಗೆ ಊರು ಮಂದ್ ಮರಿಯುವುದು, ಊರು ಕೋಲ್, ೩ ಗಂಟೆಗೆ ದೇಶ ತಕ್ಕರು ಮತ್ತು ನಾಡು ತಕ್ಕರು ಮಂದ್ ಮರಿಯುವುದು ನಂತರ ನಾಡು ಕೋಲ್ ನಡೆಯಲಿದೆ. ತಾ. ೧೦ ರಂದು ಹಗಲು ಮಹಾ ವಿಷ್ಣು ದೇವರ ವಾರ್ಷಿಕ ಪೂಜೆ, ಅಂದೇ ಸಂಜೆ ದೇವರ ಕೋಲು ಒಪ್ಪಿಸುವ ಸಂಪ್ರದಾಯದ ಆಚರಣೆಗಳು ನಡೆಯಲಿವೆ.