ನಾಪೋಕ್ಲು, ಡಿ. ೭: ಸ್ಥಳೀಯ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‌ನಲ್ಲಿ ಗ್ರಾಮಸ್ಥರೆಲ್ಲರ ಸಮಾಗಮದೊಂದಿಗೆ ಭಾನುವಾರ ನಡೆದ ಸಾಂಪ್ರದಾಯಿಕ ‘ಪುತ್ತರಿ ಕೋಲಾಟ’ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು.

ನಾಪೋಕ್ಲು, ಬೇತು ಮತ್ತು ಕೊಳಕೇರಿ ಗ್ರಾಮಗಳನ್ನು ಒಳಗೊಂಡAತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್‌ನಲ್ಲಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದAತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಳ ಕಳಿ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಮೆರವಣಿಗೆಯ ಮೂಲಕ ಹೆಜ್ಜೆ ಹಾಕಿದರು.

ಪುರಾತನ ಕಾಲದಿಂದ ಆಚರಿಸಿಕೊಂಡು ಬಂದ ಪದ್ಧತಿಯಂತೆ ಮೆರವಣಿಗೆಯ ನಡುವೆ ಕುರುಂಬರಾಟ್ ಬನದಲ್ಲಿ ವಿಶ್ರಾಂತಿಯನ್ನು ಪಡೆದು ಮಧ್ಯಾಹ್ನ ನೂರಂಬಾಡ ಮಂದ್‌ಗೆ ತಿರುವಾಭರಣದೊಂದಿಗೆ ಆಗಮಿಸಿದ ಗ್ರಾಮದ ತಕ್ಕಮುಖ್ಯಸ್ಥರನ್ನು ಕೊಳಕೇರಿ ಗ್ರಾಮದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂಪ್ರದಾಯದAತೆ ಬೇತು, ನಾಪೋಕ್ಲು ಗ್ರಾಮಸ್ಥರನ್ನು ಸ್ವಾಗತಿಸಿದರು. ನಂತರ ಕೋಲಾಟಕ್ಕೆ ಚಾಲನೆ ದೊರಕಿತು. ನಾದಕ್ಕೆ ತಕ್ಕಂತೆ ಮೂರು ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಪ್ರದಕ್ಷಿಣೆ ಬರುವುದರೊಂದಿಗೆ ಕೋಲಾಟ್ ಗಮನ ಸೆಳೆಯಿತು. ಈ ನಾಡ್ ಮಂದ್‌ನಲ್ಲಿ ದೊಡ್ಡ ಕೋಲು ಮತ್ತು ಸಣ್ಣ ಕೋಲು ಎರಡು ದಿನ ಕೋಲಾಟ ನಡೆಸಿ ನಂತರ ಮಕ್ಕಿ ದೇವಾಲಯದಲ್ಲಿ ಕೋಲು ಒಪ್ಪಿಸುವ ಪದ್ಧತಿ ಇರುತ್ತದೆ.

ಕಾಪಳಕಳಿ : ಪುತ್ತರಿ ಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಮಹತ್ವ ಇದೆ. ಹುತ್ತರಿ ಹಬ್ಬದಂದು ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ. ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೇ ಕೋಲು ಹಿಡಿದು ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಕೋಲಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡುತ್ತಾರೆ. - ದುಗ್ಗಳ ಸದಾನಂದ