ಕಣಿವೆ, ಡಿ. ೭: ಕೊಡಗು ಜಿಲ್ಲೆಯ ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಕುಶಾಲನಗರದ ಪುರಸಭೆಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಕಳೆದ ೧೩ ವರ್ಷಗಳಿಂದ ಮಡಿಕೇರಿಯ ಮಹದೇವಪೇಟೆಯಲ್ಲಿ ಖಾಸಗಿ ಕಟ್ಟಡದಲ್ಲಿ ವರ್ಷಕ್ಕೆ ೫೦ ಸಾವಿರ ಬಾಡಿಗೆಯಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಅರೆಸೇನಾಪಡೆಗೆ ಸೇರಿದ ಹಾಲಿ ಮತ್ತು ಮಾಜಿ ೪೦೦೦ ಯೋಧರಿದ್ದೇವೆ.

ನಮ್ಮಲ್ಲಿ ವಯಸ್ಸಾದ ನಿವೃತ್ತ ಯೋಧರು ಹೆಚ್ಚಿನ ಸಂಖ್ಯೆಯಲ್ಲಿದ್ದು ಕೆಲವರು ವಯೋಸಹಜವಾಗಿ ಸಾವನ್ನಪ್ಪುತ್ತಿದ್ದಾರೆ. ಅವರಿಗೆ ಮರಣ ನಿಧಿ ಕೊಡಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ಕುಶಾಲನಗರದ ಮುಳ್ಳುಸೋಗೆಯ ಸರ್ವೆ ನಂಬರ್ ೧೧/೦೧ ರಲ್ಲಿ ಇರುವ ೬೦ ಸೆಂಟು ಜಾಗವನ್ನು ಅರೆಸೇನಾಪಡೆ ಯೋಧರ ಒಕ್ಕೂಟಕ್ಕೆ ನೀಡುವ ಮೂಲಕ ಭವನ ಕಟ್ಟಿಕೊಳ್ಳಲು ಸರ್ಕಾರದಿಂದ ಜಾಗ ಹಾಗೂ ಸೂಕ್ತ ಅನುದಾನ ಒದಗಿಸಿಕೊಡಬೇಕು.

ಹಾಗಾದಲ್ಲಿ ವರ್ಷಕ್ಕೊಮ್ಮೆ ಪಾವತಿಸುವ ಬಾಡಿಗೆ ಹಣ ಉಳಿತಾಯವಾಗಿ, ಮಾಜಿ ಯೋಧರ ಕುಟುಂಬಗಳಿಗೆ ನೆರವು ನೀಡಲು ಅನುಕೂಲವಾಗಲಿದೆ ಎಂದು ಮನವಿ ಪತ್ರದ ಮೂಲಕ ಶಾಸಕರಲ್ಲಿ ಕೋರಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ದೇಶ ಸೇವೆಗೈದ ಯೋಧರ ಹಿತಾಸಕ್ತಿ ಕಾಯಬೇಕಾದುದು ಸರ್ಕಾರ ಹಾಗೂ ಸಾರ್ವಜನಿಕರ ಕರ್ತವ್ಯವಾಗಿದ್ದು, ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.

ಅಲ್ಲದೇ ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಅವರಿಗೆ ಶಾಸಕರು ಈ ಬಗ್ಗೆ ಗಮನ ಹರಿಸಲು ಸೂಚಿಸಿದರು.ಈ ಸಂದರ್ಭ ಮಾತನಾಡಿದ ಮಾಜಿ ಯೋಧ ದಿನೇಶ್ ಕುಮಾರ್, ಜೀವದ ಹಂಗು ತೊರೆದು ದೇಶ ಸೇವೆ ಗೈದು ಮನೆಗೆ ಮರಳಿರುವ ಯೋಧರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಇಂದಿನ ಯುವಕರು ಸೇನೆಗೆ ಸೇರಲು ಹಿಂಜರಿಯುವ ಅಪಾಯವಿದೆ. ಆದ್ದರಿಂದ ಯೋಧರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಆದಷ್ಟು ಬೇಗ ಈಡೇರಿಸಬೇಕು ಎಂದರು.

ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಸಂಚಾಲಕ ನೂರೇರಾ ಭೀಮಯ್ಯ, ನಿರ್ದೇಶಕರಾದ ಜಿ.ಕೆ. ದಿನೇಶ್ ಕುಮಾರ್, ಹರೀಶ್ ಗೌಡ, ರವೀಂದ್ರ, ಮನೋಹರ, ಪುಟ್ಟೇಗೌಡ, ಗೋಪಾಲಕೃಷ್ಣ, ಕುಸುಮಾವತಿ, ಲೀಲಾವೇಣಿ, ಚಂದ್ರಮತಿ, ನಳಿನಿ, ಚಂದ್ರೇಗೌಡ, ಹೊನ್ನೇಗೌಡ ಇದ್ದರು.