ಕುಶಾಲನಗರ, ಡಿ. ೭: ೨೦೨೬ ಜನವರಿ ೧೫ ರಿಂದ ೨೦ ರವರೆಗೆ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಜರುಗುವ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಭಕ್ತ ಜನರನ್ನು ಆಹ್ವಾನಿಸಲು ರಾಜ್ಯದಾದ್ಯಂತ ಸಂಚಾರ ಮಾಡುತ್ತಿರುವ ಪ್ರಚಾರ ರಥ ಶನಿವಾರ ಕುಶಾಲನಗರಕ್ಕೆ ಆಗಮಿಸಿತು.
ಈ ಸಂದರ್ಭ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರಚಾರ ರಥದಲ್ಲಿನ ಸುತ್ತೂರು ಮಠದ ಸ್ಥಾಪನಾಚಾರ್ಯ ಶ್ರೀ ಶಿವರಾತ್ರೀಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ನಾಡಿನ ಪರಂಪರೆಗಳನ್ನು ಬಿಂಬಿಸುವ ದೇಸೀಯ ಕ್ರೀಡೆಗಳ ಪ್ರದರ್ಶನಗಳೊಂದಿಗೆ ಸಾಮೂಹಿಕ ವಿವಾಹ, ಕೃಷಿ ಮೇಳ, ವಸ್ತು ಪ್ರದರ್ಶನ, ರೈತರಿಗೆ ಕೃಷಿ ಮಾಹಿತಿ ನಡೆಯಲಿದೆ ಎಂದರು. ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸುತ್ತೂರು ಜಾತ್ರೆಯಲ್ಲಿ ಕೊಡಗಿನ ಭಕ್ತ ಜನ ಪಾಲ್ಗೊಳ್ಳುವಂತಾಗಬೇಕೆAದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ನಟರಾಜು, ಕೋಶಾಧಿಕಾರಿ ಕೆ.ಪಿ. ಪರಮೇಶ್, ಕುಶಾಲನಗರದ ಹಿರಿಯ ನಾಗರೀಕರಾದ ಎಂ.ಹೆಚ್. ನಜೀರ್ ಆಹಮದ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಹಾಸನ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಪ್ರಮುಖರಾದ ಪಿ. ಮಹದೇವಪ್ಪ, ಎಂ.ಎಸ್. ಶಿವಾನಂದ, ಎಂ.ಎಸ್. ಲೋಕೇಶ್, ಕೋಳೂರು ಚಂದ್ರಪ್ಪ, ಬಸವರಾಜು, ಶಿವಲಿಂಗ, ಅಕ್ಕನ ಬಳಗದ ಮನು ದೇವಿ, ಸರೋಜ ಆರಾಧ್ಯ, ಪುಷ್ಪ, ಸೌಭಾಗ್ಯ, ಶೈಲಾ, ಪ್ರಚಾರ ರಥ ಯಾತ್ರೆಯ ಸಂಚಾಲಕ ಪಂಚಾಕ್ಷರಿ, ರಾಜಶೇಖರ, ಶಿವಪ್ರಕಾಶ್, ಆದರ್ಶ ಇದ್ದರು.