ಗೋಣಿಕೊಪ್ಪ, ಡಿ. ೮: ಲಯನ್ಸ್ ಶಾಲೆಯ ವಾರ್ಷಿಕ ಶಾಲಾ ದಿನಾಚರಣೆ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಇತ್ತೀಚೆಗೆ ನೆರವೇರಿತು. ಸಂಸ್ಥೆಯ ಮುಖ್ಯ ಶಿಕ್ಷಕರಾದ ಲತಾ ಸಿ.ಬಿ, ಘಾನ ಸಿ.ಎಸ್, ಹಾಗೂ ತಂಗಮ್ಮ ಪಿ ಡಿ ಅವರುಗಳು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಶಾಲೆ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಕುರಿತು ವರದಿ ವಾಚಿಸಿದರು.

ಮುಖ್ಯ ಅತಿಥಿ ಲಯನ್ಸ್ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ್ ಶಣೈ ಮಾತನಾಡಿ ಶಾಲೆಗಳು ಕೇವಲ ಪಠ್ಯ ಜ್ಞಾನ ನೀಡುವ ಸ್ಥಳವಲ್ಲ, ಅವು ವಿದ್ಯಾರ್ಥಿಗಳನ್ನು ರೂಪಿಸುವ ಪವಿತ್ರ ನೆಲೆಗಳು. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತಿನ ಗುಣ ಮತ್ತು ಸೃಜನಶೀಲತೆಯನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಕೈ ಜೋಡಿಸಬೇಕಿದೆ ಎಂದರು. ಕಾರ್ಯಕ್ರಮದ ಭಾಗವಾಗಿ, ಸಂಸ್ಥೆಯ ಹಿರಿಯ ಸದಸ್ಯರಾದ ಚೆಪ್ಪುಡೀರ ಸುಭಾಷ್ ಮುತ್ತಣ್ಣ ಹಾಗೂ ಕುಸುಮ್ ಮುತ್ತಣ್ಣ ದಂಪತಿಯನ್ನು ಸನ್ಮಾನಿಸಲಾಯಿತು.

ಅವರ ದೀರ್ಘಕಾಲದ ಸೇವಾ ಮೌಲ್ಯ, ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಶಾಲಾ ನಿರ್ವಹಣಾ ಮಂಡಳಿ ಗೌರವ ಸೂಚಿಸಿತು. ಶಾಲಾ ಮಟ್ಟದಿಂದ ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಂಗೊಳಿಸಿ ಪ್ರದರ್ಶನ ನೀಡಿದರು. ಮನಸೆಳೆಯುವ ನೃತ್ಯ, ಸಂಗೀತ, ಯೋಗ ಪ್ರದರ್ಶನ, ಫ್ಯಾಷನ್ ಶೋ ನೆರವೇರಿತು. ಪೋಷಕರು, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಗಣ್ಯರು, ಲಯನ್ಸ್ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಪಟ್ಟಡ ಧನು ಉತ್ತಯ್ಯ ವಹಿಸಿ ಸರ್ವರನ್ನು ಸ್ವಾಗತಿಸಿದರು. ಲಯನ್ಸ್ ಟ್ರಸ್ಟ್ ಗೌ. ಕಾರ್ಯದರ್ಶಿ ಡಾ. ಸೂರಜ್ ಉತ್ತಪ್ಪ ಶಾಲಾ ಆಡಳಿತ ಮಂಡಳಿ ವರದಿ ಮಂಡಿಸಿದರು ಶಾಲಾ ಮಂಡಳಿಯ ಖಜಾಂಚಿ ಕೆ.ಪಿ ಅಚ್ಚಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಬೋಪಣ್ಣ ಸಿ. ಪಿ, ಕಾರ್ಯದರ್ಶಿ ಎಂ.ಬಿ.ಸೌಮ್ಯ, ಮಮತಾ ಶಣೈ ವಿದ್ಯಾರ್ಥಿ ನಾಯಕರುಗಳಾದ ರುಷಿಲ್ ತಮ್ಮಯ್ಯ, ಕೆ.ಬಿ. ದೇಚಮ್ಮ, ಹಾಗೂ ರಿನ್ಸಿ ಪೂಣಚ್ಚ ವೇದಿಕೆಯಲ್ಲಿ ಇದ್ದರು. ಪ್ರೌಢ ಶಾಲಾ ಮಕ್ಕಳ ಪ್ರಾರ್ಥನೆ, ತಾನ್ಯ ದೇಚಮ್ಮ, ಭುವನ ಹಾಗೂ ಸ್ಪೆನ್ ಬೋಪಯ್ಯ ನಿರೂಪಣಿ ನೆರವೇರಿಸಿದರು.