ವೀರಾಜಪೇಟೆ, ಡಿ. ೮ : ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವೀರಾಜಪೇಟೆ ಘಟಕ ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯ ಸಹಯೋಗ ದೊಂದಿಗೆ ನಡೆದ ಕ್ರಿಸ್‌ಮಸ್ ಗಾನ ತರಂಗ- ೨೦೨೫ ಸ್ಪರ್ಧೆ ಸಂತ ಅನ್ನಮ್ಮ ದೇವಾಲಯ ಸಭಾಂಗಣದಲ್ಲಿ ನಡೆಯಿತು.

ವೀರಾಜಪೇಟೆ ವಲಯದ ಶ್ರೇಷ್ಠ ಗುರುಗಳಾದ ಫಾ. ಜೇಮ್ಸ್ ಡೊಮೇನಿಕ್ ಧ್ವಜಾರೋಹಣ ನೆರವೇರಿಸಿ, ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರೆ.ಫಾ. ಎಸ್.ಜೆ. ಪ್ರಾನ್ಸಿಸ್ ಸೆರಾವೋ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಕ್ರಿಸ್‌ಮಸ್ ಸಮಾನತೆ ಹಾಗೂ ಸಾರ್ಥಕತೆ ಸಾರುತ್ತದೆ. ದೇವ ಪುರುಷರಾದ ಯೇಸುಕ್ರಿಸ್ತನು ಭೂಮಿಯಲ್ಲಿರುವ ಮಾನವರ ಕಲ್ಯಾಣಕ್ಕಾಗಿ ಭೂಮಿಯಲ್ಲಿ ಅವತರಿಸಿದ ದಿನವನ್ನು ಕ್ರಿಸ್ಮಸ್ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಪವಿತ್ರ ದಿನ ಯೇಸುವಿನ ತ್ಯಾಗ, ಬಲಿದಾನ, ಹಂಚಿದ ಪ್ರೀತಿ, ಸ್ನೇಹವನ್ನು ಕೊಂಡಾಡಲಾಗುತ್ತದೆ ಎಂದರು.

ಉದ್ಯಮಿ ಟೋನಿ ವಿನ್ಸೆಂಟ್ ಮಾತನಾಡಿ, ಕ್ರಿಸ್‌ಮಸ್ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ತರುವ ಆಚರಣೆಯಾಗಿದೆ. ದಾನ ಮಾಡುವ ಮೂಲಕ ಕೃತಜ್ಞರಾಗಿರಬೇಕು ಮತ್ತು ಉದಾರವಾಗಿರಬೇಕೆಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಇತರರಿಗೆ ಸಹಾಯ ಮಾಡುವ ಮಹತ್ವವನ್ನು ನೆನಪಿಸುತ್ತದೆ ಎಂದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಆಂಟೋನಿ ರಾಬಿನ್ ಮಾತನಾಡಿ, ಹದಿನೈದು ವರ್ಷಗಳಿಂದ ಸಮುದಾಯದ ಒಗ್ಗಟ್ಟಿಗೆ ಹಾಗೂ ಸಂಸ್ಕೃತಿಯ ಆಚರಣೆಯಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆ ಶ್ರಮಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕ್ರಿಸ್‌ಮಸ್ ಗಾಯನ ಸ್ಫರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತದೆ. ಸಮುದಾಯದ ಐಕ್ಯತೆ, ಚರ್ಚ್ ಕಾನ್ವೆಂಟ್‌ಗಳಲ್ಲಿರುವ ಮಕ್ಕಳು, ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವ ನಿಟ್ಟನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತದೆ ಎಂದು ತಿಳಿಸಿದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಸ್‌ಮಸ್ ಹಬ,್ಬ ಋತುವಿನ ಸಂತೋಷ ಮತ್ತು ಸದ್ಭಾವನೆಯನ್ನು ಆಚರಿಸಲು, ಕ್ಯಾರೋಲ್ಗಳ ಮೂಲಕ ಪ್ರೀತಿ, ಶಾಂತಿ ಮತ್ತು ಏಕತೆಯ ಸಂದೇಶಗಳನ್ನು ಹರಡಲು ಸ್ಪರ್ಧೆ ಆಯೋಜಿಸಲಾಗಿದೆ. ಕ್ರೆöÊಸ್ತರೆಲ್ಲ ಒಂದೇ ಎನ್ನುವ ಭಾವೈಕ್ಯತೆ ಮೂಡಿಸಬೇಕು ಅನ್ನುವ ನಿಟ್ಟಿನಲ್ಲಿ ಒಂದೆಡೆ ಸೇರಲು ಇದು ವೇದಿಕೆಯಾಗಿದೆ ಎಂದರು.

ಎಐಸಿಸಿ ಉಪಾಧ್ಯಕ್ಷ ಡಿ.ಕೆ. ಬ್ರಿಜೇಶ್ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮದಲೈಮುತ್ತು ಮಾತನಾಡಿದರು.

ಈ ಸಂದರ್ಭ ಧರ್ಮ ಗುರುಗಳಾದ ಜೇಮ್ಸ್ ಡೊಮೆನಿಕ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ತಾಲೂಕು ಉಪಾಧ್ಯಕ್ಷ ಆಂತೋನಿ ಜೋಸೆಫ್, ಕಾರ್ಯದರ್ಶಿ ಸ್ಟಾಲಿನ್, ಚಾರ್ಲ್ಸ್ ಡಿಸೋಜ, ಬೆನೆಡಿಕ್ಟ್ ಸಾಲ್ದಾನಾ, ದಿನೇಶ್ ಮತಿಯಾಸ್, ಸಹಾಯಕ ಧರ್ಮಗುರು ಅಭಿಲಾಷ್, ಕೊಡಗಿನ ವಿವಿಧ ಭಾಗಗಳ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಉಪಸ್ಥಿತರಿದ್ದರು. ಗಾನ ತರಂಗ ಸ್ಫರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಹಾಗೂ ಕಾರ್ಯಕ್ರಮಕ್ಕೆ ಕೈಜೋಡಿಸಿದವರಿಗೆ ಸನ್ಮಾನಿಸಲಾಯಿತು.