ಮಡಿಕೇರಿ, ಡಿ. ೯: ವೀರಾಜಪೇಟೆ ಸರಕಾರಿ ಆಸ್ಪತ್ರೆಯನ್ನು ೪೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮೊದಲನೇ ಹಂತದಲ್ಲಿ ೨೫೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಸಂಬAಧಿಸಿದAತೆ ತಯಾರಿಸಲಾಗಿರುವ ಅಂದಾಜುಪಟ್ಟಿಗೆ ಇದೀಗ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪ್ರಭಾಕರ ಟಿ ಅವರು ಆದೇಶ ಹೊರಡಿಸಿರುವುದಾಗಿ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಮಾಹಿತಿ ನೀಡಿದ್ದಾರೆ.

ಹಾಲಿ ಇರುವ ೬೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಇದೀಗ ೨೫೦ ಹಾಸಿಗೆ (೧೯೦ ಹೆಚ್ಚುವರಿ ಹಾಸಿಗೆ) ಸಾಮರ್ಥ್ಯದೊಂದಿಗೆ ಮೇಲ್ದರ್ಜೆಗೆ ಏರಿಸುವ ಯೋಜನೆ ರೂಪಿತವಾಗಿದೆ. ರೂ. ೯೫.೬೦ ಕೋಟಿ ಅಂದಾಜು ವೆಚ್ಚದಲ್ಲಿ ವಿವಿಧ ಅಗತ್ಯ ಕಾಮಗಾರಿ ಹಾಗೂ ರೂ. ೧೬.೫೫ ಕೋಟಿಯಲ್ಲಿ ಉಪಕರಣಗಳ ವ್ಯವಸ್ಥೆ ಹಾಗೂ ರೂ. ೧೨. ೪೭ ಕೋಟಿಯ ವೆಚ್ಚದಲ್ಲಿ ವಿವಿಧ ವೃಂದದ ಹುದ್ದೆಗಳಿಗೆ ವೆಚ್ಚ ಭರಿಸಲು ರಾಜ್ಯ ಸರಕಾರದಿಂದ ಅನುಮೋದನೆ ನೀಡಲಾಗಿತ್ತು. ಇದರಂತೆ ಈ ಕಾಮಗಾರಿಯ ವಿಸ್ತೃತ ಅಂದಾಜು ಪಟ್ಟಿಯ ಆಡಳಿತಾತ್ಮಕ ಅನುಮೋದನೆಗಾಗಿ ಪ್ರತ್ಯೇಕ ಪ್ರಸ್ತಾವನೆಯ ಮೂಲಕ ಮುಖ್ಯ ಇಂಜಿನಿಯರ್ ಮೂಲಕ ಮನವಿ ಸಲ್ಲಿಸಲಾಗಿತ್ತು.

ಹಾಲಿ ಆಸ್ಪತ್ರೆ ಕಟ್ಟಡ ೭.೪೨ ಎಕರೆ ವಿಸ್ತೀರ್ಣದಲ್ಲಿದೆ. ೨೦೦೨ನೇ ಸಾಲಿನಲ್ಲಿ ನಿರ್ಮಿಸಿರುವ ತಳಮಹಡಿ, ನೆಲಮಹಡಿ, ಮೊದಲ ಮಹಡಿ ಹಾಗೂ ಎರಡನೆಯ ಮಹಡಿಯು ಆರ್‌ಸಿಸಿ ಕಟ್ಟಡವಾಗಿದ್ದು, ಇದರ ವಿಸ್ತೀರ್ಣ ೪೮೦೦ ಚದರ ಮೀಟರ್‌ಗಳಿರುತ್ತವೆ. ೧೯೫೦ನೇ ಇಸವಿಯಲ್ಲಿ ನಿರ್ಮಿಸಿರುವ ಮಂಗಳೂರು ಹೆಂಚಿನ ಛಾವಣೆಯ ಕಟ್ಟಡದಲ್ಲಿ ೩೩ ಹಾಸಿಗೆ ತಾಯಿ ಮತ್ತು ಮಕ್ಕಳ ವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಶಿಥಿಲಾವಸ್ಥೆಯಲ್ಲಿದೆ. ಈ ಎರಡು ಕಟ್ಟಡಗಳ ಸಾಮರ್ಥ್ಯ ೧೦೭ ಹಾಸಿಗೆಗಳಾಗಿವೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆ ಕಟ್ಟಡವು ಐಪಿಹೆಚ್‌ಎಸ್ ಮಾನದಂಡಗಳAತೆ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡವನ್ನು ನಿರ್ಮಿಸಬೇಕಾಗಿದೆ. ಹಾಲಿ ೨೦೦೨ರಲ್ಲಿ ನಿರ್ಮಿಸಿರುವ ಕಟ್ಟಡವು ೪೮೦೦ ಚದರ ಮೀಟರ್ ವಿಸ್ತೀರ್ಣದಲ್ಲಿ ೬೦ ಹಾಸಿಗೆಗಳನ್ನು ಒಳಗೊಂಡಿದೆ.

ಹೊಸ ಕಟ್ಟಡವನ್ನು ಹಾಲಿ ಭೌಗೋಳಿಕತೆಯ ಅನುಗುಣವಾಗಿ ನಿರ್ಮಿಸಬಹುದಾಗಿದ್ದು, ಕೆಳಮಹಡಿ ೨ ಸಾವಿರ ಚ.ಮೀ. ನೆಲಮಹಡಿ ೩೫೭೮ ಚ.ಮೀ., ಮೊದಲ ಮಹಡಿ ೩೫೭೮ ಚ.ಮೀ., ಎರಡನೇ ಮಹಡಿ ೩೬೫೫ ಚ.ಮೀ., ಮೂರನೇ ಮಹಡಿ ೨೦೮೬ ಚ.ಮೀ ಮತ್ತು ಮೆಟ್ಟಿಲುಗಳ ಮಹಡಿ (ಟೆರೇಸ್) ೧೫೦ ಚ.ಮೀ. ಸೇರಿ ಒಟ್ಟಾರೆ ಹೊಸ ಆಸ್ಪತ್ರೆ ಕಟ್ಟಡ ವಿಸ್ತೀರ್ಣವು ೧೫,೦೪೭ ಚ.ಮೀ. ಆಗುತ್ತದೆ.

ಅಲ್ಲದೆ ನರ್ಸ್ಗಳ ವಸತಿಗೃಹ ೧೫೧೯ ಚ.ಮೀ. ಗ್ರೂಪ್ ಡಿ ವಸತಿಗೃಹ ೮೨೨ ಚ.ಮೀ. ಶವಾಗಾರ ೯೦.೧೧ ಚ.ಮೀ. ಹಾಗೂ ಎಸ್‌ಪಿಟಿ ಮತ್ತು ಇಟಿಪಿ ೧೨೦ ಚ.ಮೀ. ಆಗುತ್ತಿದ್ದು, ಒಟ್ಟಾರೆ ಹೊಸ ಕಟ್ಟಡದ ವಿಸ್ತೀರ್ಣವು ೧೭,೫೯೮.೧೧ ಚ.ಮೀ. ನಿರ್ಮಿಸಲು ಕಾರ್ಯಪಾಲಕ ಅಭಿಯಂತರರು ಮೈಸೂರು ವಿಭಾಗ ಇವರು ಸದರಿ ಕಾಮಗಾರಿಯ ರೂ. ೯೫.೬೦ ಕೋಟಿ ರೂಪಾಯಿಯ ಅಂದಾಜುಪಟ್ಟಿಯನ್ನು ಸಿದ್ಧಪಡಿಸಿದ್ದು, ತಾ. ೧೦.೧೦.೨೦೨೫ ರಂದು ನಡೆದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಸೂಚಿಸಿರುವ ಕೆಲವೊಂದು ಸಲಹೆಗಳನ್ನು ಅಳವಡಿಸಿಕೊಂಡು ೨೦೨೩-೨೪ ನೇ ಸಾಲಿನ ಹಾಗೂ ೨೦೨೪-೨೫ ನೇ ಸಾಲಿಗೆ ಮುಂದುವರಿದ ಏಕರೂಪ ದರಪಟ್ಟಿಯನ್ವಯ ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿ ಮುಖ್ಯ ಇಂಜಿನಿಯರ್ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಇದಕ್ಕೆ ಕೆಲವೊಂದು ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಿ ಡಿಸಂಬರ್ ೮ ರಂದು ಆದೇಶ ಹೊರಡಿಸಲಾಗಿದೆ.