ಸೋಮವಾರಪೇಟೆ, ಡಿ. ೧೦: ತಾಲೂಕಿನ ಆಲೂರು-ಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಸಂಭ್ರಮದ ದೀಪೋತ್ಸವ ಹಾಗೂ ಶ್ರದ್ಧಾಭಕ್ತಿಯಿಂದ ಶ್ರೀ ಗುರುಸಿದ್ಧವೀರೇಶ್ವರರ ಉತ್ಸವ ನಡೆಯಿತು.

ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ದೀಪೋತ್ಸವವನ್ನು ಕಣ್ತುಂಬಿಕೊAಡರು. ಬೆಳಗ್ಗಿನಿಂದಲೇ ಕ್ಷೇತ್ರದ ದೇವರಿಗೆ ವಿಶೇಷ ಪೂಜೆ, ಅರ್ಚನೆ ನಡೆಯಿತು. ಮಹಿಳೆಯರಾದಿಯಾಗಿ ಹಲವು ಭಕ್ತರು ಮಠದ ಆವರಣವನ್ನು ತಳಿರು ತೋರಣಗಳಿಂದ ಹಾಗೂ ವೈವಿಧ್ಯಮಯ ರಂಗೋಲಿ ಬಿಡಿಸಿ ಅಲಂಕರಿಸಿದ್ದರು. ರಾತ್ರಿ ಕ್ಷೇತ್ರದ ತುಂಬೆಲ್ಲಾ ಹಣತೆಗಳು ಪ್ರಜ್ವಲಿಸುತ್ತಿದ್ದವು.

ಸಂಜೆ ನಡೆದ ಧಾರ್ಮಿಕ ಸಮಾರಂಭಲ್ಲಿ ಶಿಕ್ಷಣ ತಜ್ಞ ದಾವಣಗೆರೆಯ ಸಾಗರ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಕ್ಕಳು ಭವಿಷ್ಯದ ಬಗ್ಗೆ ಚಿಂತಿಸದೇ ಅನ್ಯ ಮಾರ್ಗ ಹಿಡಿದಿರುವುದು ಆತಂಕಕಾರಿ ವಿಚಾರವಾಗಿದೆ ಎಂದರು.

ಆನ್‌ಲೈನ್ ಗೇಮ್‌ಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟರಮಟ್ಟಿಗೆ ಕೈ ಮೀರುತ್ತಿದೆ ಎಂಬ ಬಗ್ಗೆ ಚಿಂತನೆ ಅಗತ್ಯವಾಗಿದೆ ಎಂದರು.

ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ ಎಂದು ಪ್ರತಿಪಾದಿಸಿದ ಅವರು, ಇಂದು ಕೇವಲ ಪದವಿಗಾಗಿ ಮಾತ್ರ ಶಿಕ್ಷಣ ಎಂಬAತಾಗಿದೆ. ಪದವಿಯ ಜೊತೆಗೆ ನೈತಿಕ ಶಿಕ್ಷಣವೂ ಅವಶ್ಯಕವಾಗಿದೆ ಎಂಬುದನ್ನು ಮರೆಯಬಾರದು. ಬಸವಣ್ಣನವರ ಅನುಭವ ಮಂಟಪದ ರೀತಿಯ ಶಿಕ್ಷಣ ವ್ಯವಸ್ಥೆ ಬರಬೇಕು.

ವಿದ್ಯಾರ್ಥಿಗಳು ಪ್ರಶ್ನಿಸುವು ದನ್ನು ಕಲಿಯ ಬೇಕು. ಬಸವಣ್ಣನವರ ತತ್ವಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ. ಮಕ್ಕಳಿಗೆ ಪೋಷಕರು ಹೆಚ್ಚಿನ ಸಮಯ ಹಾಗೂ ಸಂಪೂರ್ಣ ಬೆಂಬಲ ನೀಡಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮನೆಹಳ್ಳಿ ಮಠಾಧ್ಯಕ್ಷರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಶ್ರೀಕ್ಷೇತ್ರ ಮನೆಹಳ್ಳಿ ಮಠವು ಈ ಹಿಂದೆ ಅಜ್ಞಾತ ಸ್ಥಳವಾಗಿದ್ದು, ವರ್ಷದಿಂದ ವರ್ಷಕ್ಕೆ ಧಾರ್ಮಿಕತೆಯ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಕಾಡುಗಳಿಂದ ಕೂಡಿದ್ದ ಈ ಪ್ರದೇಶ ಶ್ರೀ ಗುರು ಸಿದ್ಧವೀರೇಶ್ವರ ಸ್ವಾಮಿಯವರ ಕೃಪಾ ವಿಶೇಷತೆಯಿಂದ ಗುಡಿ ಗೋಪುರಗಳು, ಪೂಜಾ ಕೈಂಕರ್ಯಗಳು, ದಾಸೋಹ ಕಾಯಕಗಳಿಂದ ಸಂಸ್ಕಾರಯುತ ಮೌಲ್ಯಗಳಿಂದ ತುಂಬಿರುವ ತಪೋಕ್ಷೇತ್ರವಾಗಿ ಬೆಳೆದು ಬರುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಉತ್ತರ ಕೊಡಗಿನಲ್ಲಿ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠವು ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಂದ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಈ ಸಂದರ್ಭ ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಚಂದ್ರಮೌಳಿ ಅವರು ಕ್ಷೇತ್ರದ ಮಾಹಿತಿಯನ್ನೊಳಗೊಂಡ ೨೦೨೬ನೇ ಸಾಲಿನ ದಿನದರ್ಶಿನಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಮುಳ್ಳೂರು ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.