ಸಿದ್ದಾಪುರ, ಡಿ. ೧೦ : ಮಾನವ ವನ್ಯಪ್ರಾಣಿ ಸಂಘರ್ಷದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಖಾಸಗಿ ಎನ್.ಜಿ.ಓ. ಸಂಸ್ಥೆ ಹಾಗೂ ಅರಣ್ಯ ಇಲಾಖೆ ವತಿಯಿಂದ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಪಾಲಿಬೆಟ್ಟ ಭಾಗದಲ್ಲಿ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು. ಪಾಲಿಬೆಟ್ಟದ ಸರ್ಕಾರಿ ಕಾಲೇಜಿನಲ್ಲಿ ಮತ್ತು ಪ್ರಾಥಮಿಕ ಪ್ರೌಢಶಾಲೆಯಲ್ಲಿ ಬೀದಿ ನಾಟಕವನ್ನು ಮಾಡುವ ಮೂಲಕ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಬಳಿಕ ಪಾಲಿಬೆಟ್ಟದ ಪಟ್ಟಣದಲ್ಲೂ ಸಾರ್ವಜನಿಕರಿಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ನಂತರ ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಚೌಡಿ ಕಾಡು ಕಾಫಿ ತೋಟದ ಮೈದಾನದಲ್ಲಿ ಕಾರ್ಮಿಕರಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಮತ್ತು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ವನ್ಯ ಪ್ರಾಣಿಗಳ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ. ಎನ್.ಹೆಚ್. ಜಗನ್ನಾಥ್. ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಉಪವಲಯ ಅರಣ್ಯ ಅಧಿಕಾರಿ ಶಶಿ.ಪಿ.ಟಿ. ಹಾಗೂ ಸಿಬ್ಬಂದಿಗಳು ಮತ್ತು ಇವ್ವಾಲ್ ಬ್ಯಾಕ್ ರೆಸಾರ್ಟ್ನ ಅಧ್ಯಕ್ಷ ಇಮ್ಯಾನ್ಯುಲ್.ಟಿ. ರಾಮಪುರಂ. ಎನ್.ಜಿ.ಓ. ಸಂಸ್ಥೆ ಪದಾಧಿಕಾರಿಗಳು ಇನ್ನಿತರರು ಹಾಜರಿದ್ದರು.