ಪೊನ್ನಂಪೇಟೆ, ಡಿ. ೧೦: ಮಾಯಮುಡಿಯ ರಿಮ್ ಫೈರ್ ಶೂಟರ್ಸ್ ಹಾಗೂ ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಮಾಯಮುಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ- ತೋಕ್ ನಮ್ಮೆ ೨೦೨೫ ಅನ್ನು ಭಾನುವಾರದಂದು ಆಯೋಜಿಸಲಾಗಿತ್ತು. ೦.೨೨ ರೈಫಲ್ಸ್ ಮತ್ತು ೧೨ನೇ ಬೋರ್ ಕೋವಿಯ ಪ್ರತ್ಯೇಕ ಎರಡು ವಿಭಾಗಗಳಲ್ಲಿ ಈ ತೋಕ್ ನಮ್ಮೆ ನಡೆಯಿತು.

೦.೨೨ ರೈಫಲ್ಸ್ ವಿಭಾಗದಲ್ಲಿ ಪುತ್ತರಿರ ನಂಜಪ್ಪ (ಪ್ರಥಮ), ಶಿಜು ಮಂಡ್ಯ (ದ್ವಿತೀಯ) ಮತ್ತು ಬಡುವಂಡ ಶ್ಲೋಕ್ ಸುಬ್ಬಯ್ಯ (ತೃತೀಯ) ಸ್ಥಾನ ಪಡೆದರೆ, ೧೨ನೇ ಬೋರ್ ಕೋವಿಯ ವಿಭಾಗದಲ್ಲಿ ಮೂಕೊಂಡ ಅಕ್ಷಿತ್ (ಪ್ರಥಮ), ಅಜ್ಜೇಟಿರ ಕಿಶನ್ (ದ್ವಿತೀಯ) ಮತ್ತು ನಾಪಂಡ ಬನ್ಸಿ (ತೃತೀಯ) ಸ್ಥಾನ ಪಡೆದುಕೊಂಡರು. ಶಾಲಾ ಮೈದಾನದ ಆವರಣದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.

ತೋಕ್ ನಮ್ಮೆಯ ಸಂಚಾಲಕರಾದ ಸಣ್ಣ್ಣುವಂಡ ವಿನಯ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಮಾಯಮುಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಪಟ್ಟಿರ ಬೋಪಣ್ಣ, ಸದಸ್ಯರಾದ ಮಲ್ಲೇಂಗಡ ಮಮತಾ ಪೂಣಚ್ಚ, ಮಾಯಮುಡಿಯ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್, ಕಾಫಿ ಬೆಳೆಗಾರರಾದ ಸಣ್ಣುವಂಡ ಸರೋಜ, ಕೆ.ಸಿ. ನರೇಂದ್ರ, ಪುಚ್ಚಿಮಾಡ ರಾಯಿ ಮಾದಪ್ಪ, ಗೋಣಿಕೊಪ್ಪಲಿನ ಟಾಟಾ ಮೋಟರ್ಸ್ ವ್ಯವಸ್ಥಾಪಕ ಪುಳ್ಳಂಗಡ ಸಿಮ್ ಕುಟ್ಟಪ್ಪ, ವ್ಯವಸ್ಥಾಪಕ ಬೋಪಣ್ಣ, ಮೊದಲಾದವರು ಭಾಗವಹಿಸಿದ್ದರು. ದಿ. ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರ ಸ್ಮರಣಾರ್ಥವಾಗಿ ಅವರ ಪತ್ನಿ ಸುಜಿತಾ ಚಂಗಪ್ಪ ಅವರು ತೋಕ್ ನಮ್ಮೆಯ ಮಧ್ಯಾಹ್ನದ ಊಟವನ್ನು ಪ್ರಾಯೋಜಿಸಿದ್ದರು. ದಿನವಿಡೀ ನಡೆದ ಈ ತೋಕ್ ನಮ್ಮೆಯಲ್ಲಿ ಕೊಡಗು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು.