ಕಣಿವೆ, ಡಿ. ೧೦: ಇಲ್ಲಿಗೆ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಆರೋಗ್ಯ ಹಾಗೂ ಸ್ವಚ್ಛತೆ ಕುರಿತಾದ ಅರಿವು ಕಾರ್ಯಕ್ರಮ ನಡೆಯಿತು. ವಿಶ್ವ ವೃಕ್ಷ ಹಾಗೂ ಸ್ವಸ್ಥಾ ಫೌಂಡೇಶನ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರದ ಸಾಯಿ ಅಸ್ಪತ್ರೆಯ ವೈದ್ಯರಾದ ಡಾ.ರಾಕೇಶ್ ವಿದ್ಯಾರ್ಥಿಗಳಿಗೆ ದೈನಂದಿನ ಜೀವನ ಕ್ರಮಗಳು, ಸ್ವಚ್ಛತೆಯ ಅರಿವು, ಮಾರಕ ಏಡ್ಸ್ ತಡೆಗಟ್ಟುವಲ್ಲಿ ಯುವ ಜನಾಂಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರೋಹಿತ್ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಜಾಗೃತಿ ಮೂಡಿಸಿದರು.
ಪರಿಸರವಾದಿ ಅಭಿಷೇಕ್ ಪರಿಸರ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಜ್ಞಾನಗಂಗಾ ವಸತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ, ಪ್ರಾಂಶುಪಾಲೆ ಸತ್ಯಸುಲೋಚನಾ, ಸ್ವಸ್ಥಾ ಫೌಂಡೇಶನ್ ನಿರ್ದೇಶಕ ದೇವರಾಜ್ ಇದ್ದರು. ಶಾಲೆಯ ಶಿಕ್ಷಕಿ ಜಲಾವತಿ ಸ್ವಾಗತಿಸಿದರು. ದೇವರಾಜು ನಿರೂಪಿಸಿದರು. ನಮಿತಾ ವಂದಿಸಿದರು.