ಸೋಮವಾರಪೇಟೆ, ಡಿ. ೧೦ : ಸೋಮವಾರಪೇಟೆ ಪಟ್ಟಣದ ಮಾಹಿತಿ ಹಕ್ಕು ಕಾರ್ಯಕರ್ತನೋರ್ವ ಮತ್ತು ಕೆಲ ಮಾಧ್ಯಮ ಪ್ರತಿನಿಧಿಗಳು ಕೆಲವು ಇಲಾಖೆಯ ಸರ್ಕಾರಿ ನೌಕರರಿಗೆ ನಿರಂತರ ಕಿರುಕುಳ ನೀಡುತ್ತಿದ್ದು, ಇದು ಮುಂದುವರಿದರೆ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರದೀಪ್ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ಪಟ್ಟಣದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತನ ಹೆಸರಿನಲ್ಲಿ ವ್ಯಕ್ತಿಯೋರ್ವ ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ತೆರಳಿ ಏಕವಚನದಿಂದ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ಕಚೇರಿಯ ಮಾಹಿತಿ ಬೇಕಿದ್ದರೆ ಮಾಹಿತಿ ಹಕ್ಕಿನಲ್ಲಿ ಲಿಖಿತವಾಗಿ ಅರ್ಜಿ ಸಲ್ಲಿಸಬೇಕು. ಅಂಚೆಯ ಮೂಲಕ ಇಲಾಖಾಧಿಕಾರಿಗಳು ಮಾಹಿತಿಯನ್ನು ನಿಗದಿತ ಸಮಯದಲ್ಲಿ ಕಳುಹಿಸಿಕೊಡುತ್ತಾರೆ. ಆದರೆ ನೇರವಾಗಿ ಕಚೇರಿಗೆ ಹೋಗಿ ಕಿರುಕುಳ ನೀಡುವುದು ನಿಯಮಬಾಹಿರವಾಗಿದೆ. ಈ ಬಗ್ಗೆ ರಕ್ಷಣೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದರು.

ಇತ್ತೀಚೆಗೆ ಕುಶಾಲನಗರದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬೇರೆ ಇಲಾಖೆಯ ಬಗ್ಗೆ ಚರ್ಚೆ ನಡೆಯುವ ವೇಳೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ಸರ್ಕಾರಿ ಆ್ಯಪ್ ಮೂಲಕ ಕಚೇರಿ ಕೆಲಸ ಮಾಡುತ್ತಿರುವ ಸಂದರ್ಭ, ಅವರ ಕೆಲಸವನ್ನು ೧೫ ನಿಮಿಷಗಳ ವಿಡಿಯೋ ಮಾಡಿರುವ ಈರ್ವರು ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುವಂತೆ ಹರಿಬಿಟ್ಟಿದ್ದಾರೆ. ಇದರಿಂದ ಮಹಿಳಾ ಅಧಿಕಾರಿ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ ಎಂದರು.

ಈ ಬಗ್ಗೆ ತಕ್ಷಣ ಶಾಸಕರ ಗಮನ ಸೆಳೆಯಲಾಗಿದ್ದು, ಶಾಸಕರು ಈರ್ವರು ಪತ್ರಕರ್ತರನ್ನು ಕರೆದು ಇಲಾಖೆಯ ಕೆಲಸ ಮಾಡುತ್ತಿರುವ ಬಗ್ಗೆ ಅಧಿಕಾರಿ ತಿಳಿಸಿದ್ದು, ಈ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ. ಒಂದು ವೇಳೆ ಸುದ್ದಿ ಮಾಡುವುದಾದಲ್ಲಿ ಅಧಿಕಾರಿಯ ಸಮಜಾಯಿಷಿಕೆಯನ್ನು ತೆಗೆದುಕೊಳ್ಳಿ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಆದರೂ ಮತ್ತೆ ಮತ್ತೆ ವೀಡಿಯೋ ಹರಿಬಿಡುತ್ತಿದ್ದಾರೆ. ಇವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರಿಗೂ ಆರ್‌ಟಿಐ ಕಾರ್ಯಕರ್ತನ ಹೆಸರಿನಲ್ಲಿ ಕಿರುಕುಳ ನೀಡಲಾಗಿತ್ತು. ಡಿವೈಎಸ್‌ಪಿ ಅವರಿಗೆ ಅಧಿಕಾರಿ ಈ ಹಿಂದೆ ದೂರು ನೀಡಿದ್ದರು. ಪೊಲೀಸ್ ಇಲಾಖೆಯಲ್ಲಿ ವಿಚಾರಣೆ ನಡೆದು ಆರ್‌ಟಿಐ ಕಾರ್ಯಕರ್ತರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಆದರೂ ಕಿರುಕುಳ ಮುಂದುವರಿಸಿದ್ದಾರೆ ಎಂದು ಹೇಳಿದರು. ಕಿರುಕುಳ ನೀಡುತ್ತಿರುವ ಮೂವರು ವ್ಯಕ್ತಿಗಳ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಪಿ.ಮಹೇಶ್, ಎಸ್.ತನುಜ, ಎನ್.ಸಿ.ಅಶ್ವಥ್, ಮಿಲನಾ ಭರತ್, ಶ್ರೀದೇವಿ ಮುದೋಳ್ ಇದ್ದರು.