ಸಿದ್ದಾಪುರ, ಡಿ. ೧೦ : ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸಿದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಸಿದ್ದಾಪುರದ ನಿವಾಸಿ ಹಾಗೂ ಅಮ್ಮತ್ತಿ ಹೋಬಳಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಎಂಬವರ ಕಾಫಿ ತೋಟದೊಳಗೆ ಮಂಗಳವಾರ ರಾತ್ರಿ ಆರು ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿವೆ. ಅಲ್ಲದೆ ಫಸಲಿರುವ ಕಾಫಿ ಗಿಡಗಳನ್ನು ನಾಶಗೊಳಿಸಿವೆ. ಇದಲ್ಲದೆ ಗದ್ದೆಯ ಸುತ್ತಲೂ ಅಳವಡಿಸಿದ್ದ ಸೋಲಾರ್ ಬೇಲಿಯನ್ನು ಹಾನಿಗೊಳಿಸಿ ಕಟಾವಿಗೆ ಬಂದ ಭತ್ತದ ಕೃಷಿ ಮಾಡಿದ ಗದ್ದೆಗಳಿಗೆ ಲಗ್ಗೆಇಟ್ಟ ಕಾಡಾನೆಗಳು ತಿಂದು ತುಳಿದು ನಾಶಗೊಳಿಸಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಪೂಣಚ್ಚ ತಿಳಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆಗಳ ಹಾವಳಿಯಿಂದ ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಹಾಗೂ ನೆಮ್ಮದಿ ಇಲ್ಲದಂತಾಗಿದೆ ಎಂದು ಕಾಫಿ ಬೆಳೆಗಾರ ಪೂಣಚ್ಚ ತಿಳಿಸಿದ್ದಾರೆ.