ಐಗೂರು, ಡಿ. ೧೦: ಮನೆಯವರ ಸ್ವಂತ ಏಣಿ ಮತ್ತು ಹಗ್ಗವನ್ನು ಬಳಸಿ ಮನೆಯ ಮುಂದೆ ಬೆಳೆದು ನಿಂತಿದ್ದ ಮರವನ್ನು ಕತ್ತರಿಸಿದ ಕಳ್ಳರು ಕತ್ತಲೆಯಲ್ಲಿ ಪರಾರಿಯಾದ ಘಟನೆ ಕಾರೆಕೊಪ್ಪ ಗ್ರಾಮದಲ್ಲಿ ನಡೆದಿದೆ.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆಕೊಪ್ಪದ ನಿವಾಸಿ ಹೆಚ್.ಆರ್. ಮಂಜುನಾಥ ಎಂಬವರ ಮನೆ ಮುಂದೆ ಸುಮಾರು ೧೦ ಅಡಿ ಎತ್ತರ ಬೆಳೆದು ನಿಂತ ಗಂಧದ ಮರವನ್ನು ತಡರಾತ್ರಿ ಸುಮಾರು ೨ ಗಂಟೆಯ ಸಮಯದಲ್ಲಿ ಮನೆಯವರು ಗಾಡನಿದ್ರೆಯಲ್ಲಿದ್ದಾಗ ಕಳ್ಳರು ಮನೆಯ ಮುಂದೆ ಇಟ್ಟಿರುವ ಏಣಿಯನ್ನು ಗಂಧದ ಮರಕ್ಕೆ ಒರಗಿಸಿ ನಿಲ್ಲಿಸಿ ಮರದ ಮೇಲ್ಭಾಗದ ಕೊಂಬೆಗಳನ್ನು ಕತ್ತರಿಸಿ ಶಬ್ದ ಬಾರದಂತೆ ಹಗ್ಗದ ಸಹಾಯದಿಂದ ಕೊಂಬೆಗಳನ್ನು ಕೆಳಕ್ಕೆ ಇಳಿಸಿದ ನಂತರ ಮರವನ್ನು ತುಂಡರಿಸಲು ಮುಂದಾಗಿದ್ದಾರೆ.

ಈ ಸಮಯದಲ್ಲಿ ಶಬ್ದ ಕೇಳಿದ ಮನೆಯ ಮಾಲೀಕ ಮಂಜುನಾಥ್ ಎಚ್ಚೆತ್ತು ಕಿಟಕಿಯ ಮುಖಾಂತರ ಕಳ್ಳರನ್ನು ನೋಡಿ ಜೋರಾಗಿ ಕೂಗಿಕೊಂಡಾಗ ಕತ್ತರಿಸಿದ ಮರವನ್ನು ಹೊತ್ತು ೩-೪ ಮಂದಿ ಕಳ್ಳರು ಕತ್ತಲಲ್ಲಿ ಪರಾರಿಯಾಗಿದ್ದಾರೆ.

ಈಗಾಗಲೇ ಶಸ್ತçಚಿಕಿತ್ಸೆಗೆ ಒಳಗಾಗಿದ್ದ ಮಂಜುನಾಥ್ ಭಯದಿಂದ ಏನು ಮಾಡಲಾಗಲಿಲ್ಲ. ಸುದ್ದಿ ತಿಳಿದ ಬೇಳೂರು ವಲಯ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ.