ಕಣಿವೆ, ಡಿ. ೧೨ : ಕುಶಾಲನಗರ ತಾಲೂಕಿನ ಹುಲುಸೆ ಗ್ರಾಮದ ಸರ್ವೇ ನಂ ೧/೧ ರಲ್ಲಿ ಬೀದಿ ನಾಯಿಗಳ ಆರೈಕೆ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿರುವ ತಾಲೂಕು ಆಡಳಿತದ ತೀರ್ಮಾನದ ವಿರುದ್ಧ ಹಕ್ಕೆ, ಮರೂರು, ರಾಂಪುರ, ಕಣಿವೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಉದ್ದೇಶಿತ ಸ್ಥಳವು ಹಕ್ಕೆ ಮತ್ತು ಮರೂರು ಗ್ರಾಮಗಳ ಜನ ವಸತಿ ಪ್ರದೇಶಕ್ಕೆ ಕೇವಲ ೧೦೦ ಮೀಟರ್ ದೂರದಲ್ಲಿದ್ದು, ಸುತ್ತಲೂ ದಟ್ಟ ಅರಣ್ಯವಿರುವುದರಿಂದ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷಕ್ಕೆ ಅಪಾಯಕಾರಿ ಪರಿಸ್ಥಿತಿ ಉಂಟಾಗಬಹುದು ಎಂದು ಗ್ರಾಮದ ನಿವಾಸಿಗಳ ಆತಂಕವಾಗಿದೆ. ನಾಯಿಗಳ ವಾಸನೆಗೆ ಚಿರತೆ ಇನ್ನಿತರ ಕಾಡು ಪ್ರಾಣಿಗಳು ಆಕರ್ಷಿತವಾಗಿ ವಸತಿ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚಿದೆ.

ಶಾಲೆಗೆ ಹೋಗುವ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಅಪಾಯಕ್ಕೆ ಒಳಗಾಗುವ ಸಂಭವದ ಜೊತೆಗೆ ಪರಿಸರ ಮಾಲಿನ್ಯವೂ ಉಂಟಾಗಲಿದೆ. ಕೇಂದ್ರ ಸ್ಥಳದಲ್ಲಿಯೇ ಹಾರಂಗಿ ಎಡದಂಡೆ ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ, ನಾಯಿ ಆಹಾರ ತ್ಯಾಜ್ಯ ಮತ್ತು ವಾಸನೆಯಿಂದಾಗಿ ನೀರು ಕಲುಷಿತವಾಗುವ ಅಪಾಯವಿದೆ.

ಚಿನ್ನೇನಹಳ್ಳಿ, ಕಲ್ಗೆರೆ, ಮರೂರು, ರಾಂಪುರ, ಕಣಿವೆ ಗ್ರಾಮಗಳ ಸಂಪರ್ಕ ಮಾರ್ಗದಲ್ಲಿ ಮಹಿಳೆಯರು ಮಕ್ಕಳ ಸಂಚಾರಕ್ಕೆ ಧಕ್ಕೆ ಉಂಟಾಗುವ ಆತಂಕದಲ್ಲಿ ನಿವಾಸಿಗಳಿದ್ದಾರೆ. ಹುಲುಸೆ ಗ್ರಾಮದ ಸರ್ವೇ ನಂ. ೧/೧ರ ಸ್ಥಳವು ಅರಣ್ಯದ ಗಡಿಯಲ್ಲಿಯೇ ಇದ್ದು ಜನವಸತಿಯೂ ಇದೆ. ಈಗಾಗಲೇ ಕಾಡಾನೆ - ಮಾನವ ಸಂಘರ್ಷ ತೀವ್ರವಾಗಿರುವ ಈ ಹೊತ್ತಿನಲ್ಲಿ ಇಲ್ಲಿ ಬೀದಿನಾಯಿಗಳ ಆರೈಕೆ ಕೇಂದ್ರ ಎಷ್ಟು ಸಮಂಜಸ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ತಜ್ಞರ ಸಲಹೆ ಅಗತ್ಯ

ಜನವಸತಿ ಪ್ರದೇಶದಲ್ಲಿ ನಾಯಿಗಳ ಆರೈಕೆ ಕೆಂದ್ರ ತೆರೆಯುವ ಕುರಿತು ಪರಿಸರ ತಜ್ಞರ ಸಲಹೆ ಪಡೆಯಬೇಕೆಂದು ಆಗ್ರಹಿಸಿರುವ ಗ್ರಾಮಸ್ಥರು ಉದ್ದೇಶಿತ ಸ್ಥಳ ಕೈ ಬಿಟ್ಟು ಬದಲೀ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಎಚ್ಚರಿಕೆ

ನಾಯಿಗಳ ಆರೈಕೆ ಕೇಂದ್ರದ ನಿರ್ಧಾರವನ್ನು ಬಲವಂತವಾಗಿ ಜಾರಿ ಮಾಡಿದರೆ, ಸಂಘಟಿತ ಪ್ರತಿಭಟನೆ ನಡೆಸುವ ಅವಕಾಶವಿದೆ. ಜನರ ಭದ್ರತೆ, ಪರಿಸರ ರಕ್ಷಣೆಗೆ ಮತ್ತು ಆನೆ - ಮಾನವ ಸಂಘರ್ಷ ನಿಯಂತ್ರಣಕ್ಕೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ವಾಸಿಗಳು ಒತ್ತಾಯಿಸಿದ್ದಾರೆ.