ವೀರಾಜಪೇಟೆ, ಡಿ. ೧೩: ವೀರಾಜಪೇಟೆಯ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಕಂಪೆನಿಯ ವತಿಯಿಂದ ೧೫ ದಿವಸಗಳ ಕಾಲ ಸರ್ಟಿಫಿಕೇಟ್ ಕೋರ್ಸ್ ಅನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಇನ್ಫೋಸಿಸ್ ಕಂಪೆನಿಯ ಸಿಎಸ್‌ಆರ್ ಚಟುವಟಿಕೆಯ ಅನ್ವಯ ಈ ಕೋರ್ಸ್ ಅನ್ನು ಆಯೋಜಿಸಲಾಗಿತ್ತು.
ಈ ಸರ್ಟಿಫಿಕೇಟ್ ಕೋರ್ಸ್ಗೆ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಚಾಲನೆ ನೀಡಿದರು. ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಕಾರ್ಯಕ್ರಮದ ಸ್ವರೂಪದ ಬಗ್ಗೆ ಮಾತನಾಡಿದರು. ೧೫ ದಿವಸಗಳ ಕಾಲ ಜರುಗಿದ ಈ ಸರ್ಟಿಫಿಕೇಟ್ ಕೋರ್ಸ್ನಲ್ಲಿ ಇನ್ಫೋಸಿಸ್ ಕಂಪೆನಿಯ ತರಬೇತುದಾರರಾದ ನಳಿನಿ ಬಸವರಾಜ್ ಹಾಗೂ ವಿನೋದ್ ಮರಿ ರಾಜನ್ ವಿದ್ಯಾರ್ಥಿಗಳಿಗೆ ಸಂವಹನದ ವಿಧಾನ, ಭಾಷೆ ಹಾಗೂ ಸಾಫ್ಟ್ ಸ್ಕಿಲ್ಸ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೆಸ್ಯುಮ್ ಅನ್ನು ತಯಾರಿಸುವ ಬಗ್ಗೆ, ಸಂದರ್ಶನವನ್ನು ಎದುರಿಸುವ ಬಗ್ಗೆ ತರಬೇತಿ ನೀಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಗುಂಪು ಚಟುವಟಿಕೆಗಳನ್ನು ನೀಡುವುದರ ಮೂಲಕ ಸಂವಹನ, ಕೌಶಲ್ಯ ವೃದ್ಧಿಗೆ ತರಬೇತಿಗೊಳಿಸಿದರು.
ಮಾದರಿ ಸಂದರ್ಶನವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ಎದುರಿಸುವ ಬಗ್ಗೆ, ತಯಾರಿ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳು ಹಾಗೂ ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳು, ಸರ್ಟಿಫಿಕೇಟ್ ಕೋರ್ಸ್ನ ಮುಖ್ಯ ಕೇಂದ್ರ ಬಿಂದುಗಳಾಗಿದ್ದವು. ಈ ಕೋರ್ಸ್ನಲ್ಲಿ ಪದವಿ ಕಾಲೇಜಿನ ಅಂತಿಮ ತರಗತಿಯ ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮುಕ್ತಾಯಗೊಂಡ ಬಳಿಕ ಅಂತಿಮ ಪದವಿಯ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಒಳಗೊಂಡು ಮೈಸೂರಿನ ಇನ್ಫೋಸಿಸ್ ಕಾರ್ಪೊರೇಟ್ ತರಬೇತಿ ಕ್ಯಾಂಪಸ್‌ಗೆ ಭೇಟಿ ನೀಡಿದರು. ವಿವಿಧೆಡೆಗಳಿಂದ ಆಗಮಿಸಿದ್ದ ೯೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೆಡೆಯಲ್ಲಿ ಸೇರುವ ಮೂಲಕ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ಫೋಸಿಸ್ ಕಾರ್ಪೊರೇಟ್ ಸಂಸ್ಥೆಯ ಸೆಲ್ವಪತಿ ಹಾಗೂ ಪವಿತ್ರ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಉದ್ಯೋಗ ಹಾಗೂ ಕೌಶಲ ಅಭಿವೃದ್ಧಿ, ಉದ್ಯೋಗ ಅವಕಾಶಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪರಸ್ಪರ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಉಪನ್ಯಾಸಕರುಗಳಾದ ಸಜೀರ, ಸುನಿತಾ, ನಿರ್ಮಲ, ಶಿಲ್ಪ, ಮುತ್ತಮ್ಮ, ನಮ್ರತಾ ಹಾಗೂ ಬಿನ್ಸಿ ಉಪಸ್ಥಿತರಿದ್ದರು.