ಶ್ರೀಮಂಗಲ, ಡಿ. ೧೩ : ಟಿ. ಶೆಟ್ಟಿಗೇರಿ -ಬಿರುನಾಣಿ ಮುಖ್ಯ ರಸ್ತೆಯಲ್ಲಿ ಮಾರುತಿ ಬ್ರೀಝ ಕಾರು ರಸ್ತೆ ನಡುವೆ ಅಡ್ಡ ಬಂದ ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಅಪ್ಪಳಿಸಿ ರಸ್ತೆಗೆ ಅಡ್ಡ ಬಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ನೆಮ್ಮಲೆ ಗ್ರಾಮದ ಕಾರ್ಮಿಕ ಗಪ್ಪು ಮೃತ ವ್ಯಕ್ತಿಯಾಗಿದ್ದು, ಇಲ್ಲಿನ ಸ್ಥಳೀಯ ಬೆಳೆಗಾರರೊಬ್ಬರ ಲೈನ್ ಮನೆಯಲ್ಲಿ ವಾಸವಾಗಿದ್ದರು. ನಾಲ್ಕೇರಿ ಗ್ರಾಮದ ಸಾಗರ್ ಪೂಣಚ್ಚ ಅವರಿಗೆ ಸೇರಿದ ಬ್ರಿಝ ಕಾರನ್ನು (ಕೆಎ ೧೨ ಎಂಎ ೧೭೬೦) ಸ್ವತಃ ಸಾಗರ್ ಪೂಣಚ್ಚ ಚಾಲಿಸುತ್ತಿದ್ದರು. ಹಠಾತ್ತಾಗಿ ವ್ಯಕ್ತಿ ರಸ್ತೆಗೆ ಅಡ್ಡ ಬಂದ ಹಿನ್ನೆಲೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ ಫಾರ್ಮರ್‌ಗೆ ಡಿಕ್ಕಿಯಾಗಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನ ಚಾಲಕ ಸಾಗರ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ, ವಾಹನದಲ್ಲಿದ್ದ ಅಸ್ಸಾಂ ಮೂಲದ ಕಾರ್ಮಿಕನಿಗೂ ಗಂಭೀರ ಗಾಯವಾಗಿದ್ದು ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.