ಶ್ರೀಮಂಗಲ, ಡಿ. ೧೪: ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಪುತ್ತರಿ ಊರೋರ್ಮೆ ಹಾಗೂ ೬೯ನೇ ವರ್ಷದ ವಾರ್ಷಿಕ ಮಹಾಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಊರೋರ್ಮೆ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್ ಅವರು ಕೊಡವ ಹಬ್ಬ ದಿನಗಳಲ್ಲಿ ಹಾಗೂ ಮಂದ್ ಇತ್ಯಾದಿ ದಿನಗಳಲ್ಲಿ ಮದುವೆ ಇತರ ಸಮಾರಂಭಗಳು, ಕ್ರೀಡಾಕೂಟವನ್ನು ಆಯೋಜಿಸುವುದರಿಂದ ನಮ್ಮ ಹಬ್ಬಗಳನ್ನು ಹಾಗೂ ಮಂದ್ ಗಳಲ್ಲಿ ಭಾಗವಹಿಸುವುದಕ್ಕೆ ಹಿನ್ನಡೆಯಾಗುತ್ತದೆ.
ಆದ್ದರಿಂದ ಇಂತಹ ಸಮಾರಂಭ ಕಾರ್ಯಕ್ರಮಗಳನ್ನು ದಿನ ನಿಗದಿಪಡಿಸುವಾಗ ಹಬ್ಬದ ದಿನಗಳಲ್ಲಿ ಮತ್ತು ಪುತ್ತರಿಹಬ್ಬ ಕಳೆದು ಹಲವು ದಿನ ಊರ್ಮಂದ್, ನಾಡ್ ಮಂದ್ ಕಾರ್ಯಕ್ರಮ ಇರುವುದನ್ನು ಅರಿತುಕೊಂಡು ದಿನ ನಿಗದಿಪಡಿಸುವಂತೆ ಸಲಹೆ ನೀಡಿದರು. ಹಬ್ಬದ ದಿನಗಳಲ್ಲಿ ಇಂತಹ ಸಮಾರಂಭಗಳನ್ನು ನಡೆಸುವುದರಿಂದ ಸಂಸ್ಕೃತಿಗೆ ಹಿನ್ನಡೆಯಾಗಲಿದೆ ಹಾಗೂ ಆಚರಣೆಗಳಿಗೆ ತೊಂದರೆಯಾಗುತ್ತದೆ. ಇದನ್ನು ಎಲ್ಲರೂ ಮನಗಾಣಬೇಕೆಂದು ಕರೆ ನೀಡಿದರು. ಪುತ್ತರಿ ಹಬ್ಬ ಕಳೆದು ನಡೆಯುವ ಊರ್ ಮಂದ್ ನಲ್ಲಿ ಗ್ರಾಮದ ಎಲ್ಲಾ ಕುಟುಂಬದಿAದ ಪ್ರತ್ಯೇಕ ತಂಡದಿAದ ಪುತ್ತರಿ ಕೋಲಾಟ್ನಲ್ಲಿ ಕಡ್ಡಾಯವಾಗಿ ಭಾಗವಹಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಹಿರಿಯರು ರೂಪಿಸಿರುವ ಪೊರಾಡು ಊರು ಪಂಚಾಯಿತಿಯಲ್ಲಿ ಗ್ರಾಮದ ಯಾವುದೇ ಭಿನ್ನಾಭಿಪ್ರಾಯ ವಿವಾದಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು. ಹಿರಿಯರು ರೂಪಿಸಿದ ಈ ವ್ಯವಸ್ಥೆಯನ್ನು ಕಡೆಗಣಿಸಿ ಪೊಲೀಸ್ ಹಾಗೂ ನ್ಯಾಯಾಲಯಗಳಿಗೆ ಹೋಗುವುದು ಸರಿಯಲ್ಲ. ಪೊಲೀಸ್ ಹಾಗೂ ನ್ಯಾಯಾಲಯಗಳಲ್ಲಿ ಹೋದಂತಹ ಹಲವು ಪ್ರಕರಣವನ್ನು ಊರು ಪಂಚಾಯಿತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲಾಗಿದೆ ಎಂದು ಎಂದು ಪ್ರಕಾಶ್ ಅವರು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಊರ್ ತಕ್ಕರಾದ ಅಣ್ಣೀರ ಕಾಶಿ ತಮ್ಮಯ್ಯ, ಕಾರ್ಯದರ್ಶಿ ಮೀದೇರಿರ ಹರೀಶ್, ಆಡಳಿತ ಮಂಡಳಿ ನಿರ್ದೇಶಕರಾದ ಅಣ್ಣೀರ ಪ್ರಭು ಪೂವಯ್ಯ, ಅಣ್ಣೀರ ಪೆಮ್ಮಯ್ಯ, ಬಲ್ಯಮೀದೇರಿರ ಶಿವ ಕುಮಾರ್, ಪ್ರತೀಪ್ ಕುಮಾರ್, ಮೋಹನ್ ಕೂಮಾರ್, ಶರಣ್ ಚಂಗಪ್ಪ, ಮೀದೇರಿರ ಚಂಗಪ್ಪ, ದೇವರ ಕಲಪರೆ ಬಲ್ಯಮೀದೇರಿರ ಗಣಪತಿ, ಮೀದೇರಿರ ವಿಜಯ್, ಅಣ್ಣೀರ ನಿರಂಜನ್ ಇದ್ದರು.