ಮಡಿಕೇರಿ, ಡಿ. ೧೪: ಜಿಲ್ಲಾ ವಿಪ್ರ ಸಮುದಾಯದವರಿಗೆ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಹಾಗೂ ತಾಲೂಕು ಸಂಘಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೪ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ನ ಚಾಂಪಿಯನ್ ಆಗಿ ವೀರಾಜಪೇಟೆ ಈಗಲ್ಸ್ ತಂಡ ಹೊರಹೊಮ್ಮಿದೆ. ರನ್ನರ್ಸ್ ಪ್ರಶಸ್ತಿಯನ್ನು ಗುಡ್ಡೆಹಿತ್ಲು ಕ್ರಿಕೆಟರ್ಸ್ ತಂಡ ತನ್ನದಾಗಿಸಿಕೊಂಡಿದೆ.

ವೀರಾಜಪೇಟೆ ಜೂನಿಯರ್ ಕಾಲೇಜಿನಲ್ಲಿ ನಾಕ್ ಔಟ್ ಮಾದರಿಯಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಡ್ಡೆಹಿತ್ಲು ತಂಡ ನಿಗದಿತ ೫ ಓವರ್‌ಗಳಲ್ಲಿ ೪ ವಿಕೆಟ್‌ಗಳನ್ನು ಕಳೆದುಕೊಂಡು ೬೪ ರನ್ ಗಳಿಸಿತು. ತಂಡದ ಪರ ಕಾರ್ತಿಕ್ ಕೆ.ಜಿ ೨೦ ಎಸೆತಗಳಲ್ಲಿ ೪೫ ರನ್ ಗಳಿಸಿದರು. ಇದನ್ನು ಬೆನ್ನಟ್ಟಿದ ವೀರಾಜಪೇಟೆ ಈಗಲ್ಸ್ ತಂಡ ೪.೩ ಓವರ್‌ಗಳಲ್ಲಿ ೨ ವಿಕೆಟ್ ಗಳನ್ನು ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ಲೋಕಿ ೧೬ ಎಸೆತಗಳಲ್ಲಿ ಅಜೇಯ ೪೪ ರನ್ ಗಳಿಸಿ ತಂಡದ ಗೆಲುವಿಗೆ ಸಹಕರಿಸಿದರು.

ಟೂರ್ನಿಯಲ್ಲಿ ಪೊನ್ನಂಪೇಟೆ ಅರ್ಚಕರ ಸಂಘ, ಚೆಯ್ಯಂಡಾಣೆ ವಾರಿಯರ್ಸ್, ಫ್ರೆಂಡ್ಸ್ ಕ್ರಿಕೆಟರ್ಸ್ ನೆಲ್ಲಿಹುದಿಕೇರಿ, ಗುಡ್ಡೆಹಿತ್ಲು ಕ್ರಿಕೆಟರ್ಸ್, ಕಡಂಗ ಲಯನ್ಸ್, ಮಡಿಕೇರಿ ವಿಪ್ರಾಸ್, ಕರಡ ಬುಲ್ಸ್, ವೀರಾಜಪೇಟೆ ಈಗಲ್ಸ್ ಹಾಗೂ ಟೀಂ ಬೆನಕ ಮಡಿಕೇರಿ ಸೇರಿ ಒಟ್ಟು ೯ ತಂಡಗಳು ಪಾಲ್ಗೊಂಡಿದ್ದವು.

ಅದೇ ಮೈದಾನದಲ್ಲಿ ಜರುಗಿದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಐದು ತಂಡಗಳು ಹಾಗೂ ಮಹಿಳಾ ವಿಭಾಗದಲ್ಲಿ ನಾಲ್ಕು ತಂಡಗಳು ಪಾಲ್ಗೊಂಡಿದ್ದವು. ಪುರುಷರ ವಿಭಾಗದಲ್ಲಿ ಚೆಯ್ಯಂಡಾಣೆ ವಾರಿಯರ್ಸ್ ತಂಡ, ಕಡಂಗ ಲಯನ್ಸ್ ತಂಡ ,ಮಡಿಕೇರಿಯ ವಕೀಲ ಬ್ರಹ್ಮಾಸ್ ತಂಡ, ಕರಡ ಬುಲ್ಸ್ ತಂಡ ಹಾಗೂ ಪೊನ್ನಂಪೇಟೆ ಅರ್ಚಕರ ತಂಡಗಳು ಸ್ಪರ್ಧಿಸಿ ಕರಡ ಬುಲ್ಸ್ ತಂಡ ಪ್ರಶಸ್ತಿಯನ್ನು ಮುಡಿ ಗೇರಿಸಿಕೊಂಡಿತು. ಮಡಿಕೇರಿಯ ವಕೀಲ ಬ್ರಹ್ಮಾಸ್ ತಂಡ ದ್ವಿತೀಯ ಸ್ಥಾನ ಗಳಿಸಿತು.

ಮಹಿಳಾ ವಿಭಾಗದಲ್ಲಿ ಕೈಕೇರಿಯ ಭಗವತಿ ವಿಪ್ರ ಮಹಿಳಾ ಸಂಘ, ಚೆಯ್ಯಂಡಾಣೆಯ ಶ್ರೀ ಲಕ್ಷಿö್ಮ ತಂಡ, ಪೊನ್ನಂಪೇಟೆಯ ಶ್ರೀದೇವಿ ಮಹಿಳಾ ಸಂಘ ಹಾಗೂ ಮಡಿಕೇರಿಯ ಪವರ್ ಪುಲ್ಲರ್ ತಂಡಗಳು ಪಾಲ್ಗೊಂಡು ಪ್ರಶಸ್ತಿಯನ್ನು ಪೊನ್ನಂಪೇಟೆಯ ಶ್ರೀದೇವಿ ಮಹಿಳಾ ತಂಡ ಮುಡಿಗೇರಿಸಿಕೊಂಡಿತು. ಮಡಿಕೇರಿಯ ಪವರ್ ಪುಲ್ಲರ್ಸ್ ತಂಡ ದ್ವಿತೀಯ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸ್ಥಾನಗಳಿಸಿತು. ಬಹುಮಾನ ವಿತರಣಾ ಕಾರ್ಯಕ್ರಮ ಜನವರಿ ತಿಂಗಳಿನಲ್ಲಿ ನಡೆಯಲಿದೆ.

ವಿಪ್ರ ಸಮಾಜಕ್ಕೆ ಶಕ್ತಿ ಇದೆ : ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ವಿಪ್ರ ಸಮಾಜಕ್ಕೆ ಶಕ್ತಿ ಇದೆ. ವಿಪ್ರ ಕ್ರೀಡೋತ್ಸವ ಸದೃಢ ಸಮಾಜ ನಿರ್ಮಿಸಲು ಜನಾಂಗಕ್ಕೆ ಶಕ್ತಿ ನೀಡಲಿ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವಿಪ್ರ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವು ಮಾತನಾಡುವುದನ್ನು ಕಡಿಮೆ ಮಾಡಿದ್ದೇವೆ. ಸಂಬAಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕ್ರೀಡಾಕೂಟದ ಮೂಲಕ ಸಮಾಜದವರನ್ನು ಪರಸ್ಪರ ಭೇಟಿಯಾಗಲು ಉತ್ತಮ ಅವಕಾಶವಾಗಿದೆ. ದೈಹಿಕ ಕ್ಷಮತೆ, ಆರೋಗ್ಯವನ್ನು ಬೆಳೆಸುವ ಕೆಲಸವನ್ನು ಕ್ರೀಡೆ ಮಾಡುತ್ತದೆ. ಎಲ್ಲಾ ಸಮಾಜದವರು ಸಂಘಟನೆ ಬಲಪಡಿಸಲು ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ವಿಪ್ರ ಕ್ರೀಡೋತ್ಸವವೂ ಜನಪ್ರಿಯವಾಗಲಿ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ರಾಮಚಂದ್ರ ಮೂಗೂರು ವಹಿಸಿದ್ದರು. ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ಅಧ್ಯಕ್ಷ ಹರಿ ಶಂಕರ್ ಪ್ರಸಾದ್ ಪಿ.ಎನ್, ಕ್ರೀಡಾ ಸಂಚಾಲಕ ಬಿ.ಕೆ. ಜಗದೀಶ್, ಸಹ ಸಂಚಾಲಕ ಸುಧೀರ್ ಮಕ್ಕಿಮನೆ, ನಿರೂಪಕ ಹರೀಶ್ ಸರಳಾಯ, ದಾನಿ ಸುಲೋಚನ ಪಾಲಂಗಾಲ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಪದಾಧಿಕಾರಿಗಳು, ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಶ ಭಟ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸಿ. ಎಸ್ ಸುರೇಶ್ ನಿರೂಪಿಸಿದರು. ಕ್ರೀಡಾ ಸಂಚಾಲಕ ಬಿ.ಕೆ ಜಗದೀಶ್ ವಂದಿಸಿದರು.