ಕುಶಾಲನಗರ, ಡಿ ೧೪: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಸ್ತು, ಸಂಯಮದೊAದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು.

ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಕೆ.ಬಿ. ಉತ್ಸವ-೨೦೨೫ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ಸಂಸ್ಕಾರ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡು ಗುರುಹಿರಿಯರ ಬಗ್ಗೆ ಗೌರವ ತೋರುವುದು ಅಗತ್ಯವಿದೆ. ಕಠಿಣ ಪರಿಶ್ರಮದಿಂದ ಕಲಿತು ಸುಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪುಟ್ಟರಾಜು ಮಾತನಾಡಿ, ಶಿಕ್ಷಣ ವಿದ್ಯಾರ್ಥಿಗಳ ಮನಸ್ಸನ್ನು, ಬೌದ್ದಿಕ ಸಾಮರ್ಥ್ಯವನ್ನು ವಿಕಸನಗೊಳಿಸುತ್ತದೆ. ಶಿಕ್ಷಣದ ಮೂಲ, ಪಠ್ಯಪುಸ್ತಕಗಳಲ್ಲಿನ ವಿಚಾರಗಳ ಇತಿಹಾಸದ ಬಗ್ಗೆ ಅರಿವು ಹೊಂದುವುದು ಅವಶ್ಯವಿದೆ. ಪಡೆದ ಶಿಕ್ಷಣಕ್ಕೆ ತಕ್ಕಂತಹ ಉತ್ತಮ ನಡವಳಿಕೆ ವಿದ್ಯಾರ್ಥಿಗಳಲ್ಲಿ ಕಂಡುಬರಬೇಕಿದೆ ಎಂದರು.

ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಶಾಂತಕುಮಾರ್ ಹಾಗೂ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕಿ ಸ್ಮಿತಾ ಅವರು ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರದಿ ವಾಚಿಸಿದರು. ಕುಶಾಲನಗರದ ಪ್ರಧಾನ ಗೌತಮ್ ವಿದ್ಯಾ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣ ಬಿ. ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಬೈಲುಕೊಪ್ಪೆಯ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ಮಂಜುನಾಥ್ ಬಿ., ಕೆ.ಬಿ. ಕಾಲೇಜು ಆಡಳಿತಾಧಿಕಾರಿ ಜಯವರ್ಧನ್, ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರುದ್ರಪ್ಪ ಸೇರಿದಂತೆ ಉಪನ್ಯಾಸಕ ವೃಂದದವರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರು ಇದ್ದರು.

ಇದೇ ಸಂದರ್ಭ ತಾಲೂಕು ದಂಡಾಧಿಕಾರಿ ಕಿರಣ್ ಜಿ. ಗೌರಯ್ಯ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಬಿ. ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.