ಮಡಿಕೇರಿ, ಡಿ. ೧೫: ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ನಡೆದ ಘಟನಾವಳಿಯ ಸ್ಮರಣೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೋ) ಸಂಘಟನೆ ತಾ. ೧೭ ರಂದು (ನಾಳೆ) ಮಡಿಕೇರಿಯ ಕೋಟೆ ಆವರಣದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
ಈ ಬಗ್ಗೆ ಯುಕೋ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಮಾಹಿತಿ ನೀಡಿದ್ದಾರೆ. ೧೯೩೦ ರ ಡಿಸೆಂಬರ್ ೧೭ ರಂದು ಸ್ವಾತಂತ್ರö್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಹಿರಿಯರಾದ ಮಲ್ಲೇಂಗಡ ಚಂಗಪ್ಪ, ಸಹವರ್ತಿಗಳಾದ ಬಿ.ಜಿ. ಗಣಪಯ್ಯ, ಮಂಡೇಪAಡ ಕಾರ್ಯಪ್ಪ ಹಾಗೂ ಸಂಗಡಿಗರೊAದಿಗೆ ಸೇರಿ ಮಡಿಕೇರಿ ಕೋಟೆಯಲ್ಲಿ ಬ್ರಿಟಿಷರ ಸರ್ಪಗಾವಲಿನಲ್ಲಿದ್ದವರ ಕಣ್ತಪ್ಪಿಸಿ ಬೆಳಗ್ಗಿನ ಜಾವದಲ್ಲಿ ಬ್ರಿಟಿಷ್ ಧ್ವಜವನ್ನು ಕಿತ್ತೆಸೆದು ತ್ರಿವರ್ಣ ಧ್ವಜವನ್ನು ಹಾರಿಸಿದ ಸಾಹಸ ಮೆರೆದಿದ್ದರು. ಇದೊಂದು ಇತಿಹಾಸದ ಘಟನೆಯಾಗಿದೆ. ಇದೀಗ ಈ ಸಾಹಸಕ್ಕೆ ೯೫ ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ‘ನೆಪ್ಪ್ರ ನಳತ್ ಮಾಂಜತ ಮೊಟ್ಟ್’ (ನೆನಪಿನ ಅಂಗಳದಲ್ಲಿ ಮರೆಯದ ಹೆಜ್ಜೆ) ಎಂಬ ಪರಿಕಲ್ಪನೆಯಲ್ಲಿ ಈ ಹೋರಾಟಗಾರರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ತಾ. ೧೭ ರ ಬುಧವಾರ ಅಪರಾಹ್ನ ೨ ರಿಂದ ಸಂಜೆ ೫.೩೦ ರ ತನಕ ಸ್ವಾತಂತ್ರö್ಯ ಮತ್ತು ಕೊಡಗು ‘ಫ್ಯೂಜನ್ ಆಫ್ ಹಿಸ್ಟರಿ, ಮ್ಯೂಸಿಕ್ ಅಂಡ್ ಪೇಟ್ರಿಯಾಟಿಸಮ್’ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ಒಂದಷ್ಟು ಮಾಹಿತಿ, ಮಾತುಕತೆ, ಆಟ್-ಪಾಟ್, ದೇಶಭಕ್ತಿಗೀತೆ ನಡೆಯಲಿದ್ದು ಎಲ್ಲರ ಸಹಕಾರ ಬಯಸುವುದಾಗಿ ಅವರು ಕೋರಿದ್ದಾರೆ.